ಮುಗಿಯದ ಆಡಿಯೋ ರಾದ್ದಾಂತ ಎಸ್ಐಟಿ ತನಿಖೆಗೆ ಕೈಪಟ್ಟು ಬಿಜೆಪಿ ವಿರೋಧ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಫೆ. ೧೨- ರಾಜ್ಯ ರಾಜಕೀಯದಲ್ಲಿ ರಾದ್ಧಾಂತಕ್ಕೆ ಕಾರಣವಾಗಿರುವ ಆಪರೇಷನ್ ಆಡಿಯೋದ ತನಿಖೆಯನ್ನು ಎಸ್ಐಟಿಗೆ ವಹಿಸಿರುವ ಸಭಾಧ್ಯಕ್ಷರ ರೂಲಿಂಗ್‌ನ್ನು ಪುನರ್ ಪರಿಶೀಲಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಾಕಿದರೆ, ಎಸ್ಐಟಿ ತನಿಖೆಯೇ ಇರಲಿ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತಿ ಪಟ್ಟು ಹಿಡಿದರೆ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಸಭಾಧ್ಯಕ್ಷರು ನೀಡಿರುವ ರೂಲಿಂಗ್‌ನ್ನು ಮರು ಪರಿಶೀಲಿಸಿ ಎಂದು ಬಿಜೆಪಿ ಮನವಿ ಮಾಡಿ, ಎಸ್ಐಟಿ ತನಿಖೆಯಿಂದ ಆಗುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿ, ಎಸ್ಐಟಿ ತನಿಖೆ ಬದಲು ಬೇರೆ ತನಿಖೆ ನಡೆಸುವಂತೆ ಓಲೈಸುವ ಪ್ರಯತ್ನ ನಡೆಸಿದರೆ, ಆಡಳಿತಾರೂಢ ಪಕ್ಷ ಎಸ್ಐಟಿ ತನಿಖೆಯೇ ಇರಲಿ, ತೀರ್ಪನ್ನು ಬದಲಾಯಿಸಬೇಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದು ಸದನದಲ್ಲಿ ಈ ಕುರಿತ ಸುದೀರ್ಘ ಚರ್ಚೆಗೆ ಕಾರಣವಾಯಿತು.

ಇಂದು ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಮಾಧುಸ್ವಾಮಿಯವರು ಮಾತನಾಡಿ, ಸಭಾಧ್ಯಕ್ಷರು ಆಡಿಯೋ ಪ್ರಕರಣವನ್ನು ಎಸ್ಐಟಿ ತನಿಖೆ ವಹಿಸಿರುವುದರಿಂದ ಆಗುವ ತೊಂದರೆಯನ್ನು ವಿವರವಾಗಿ ಹೇಳಿ, ವಿಧಾನಸಭೆಯಲ್ಲಿ ಒಂದು ಕೆಟ್ಟ ಸಂಪ್ರದಾಯಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಎಸ್ಐಟಿ ಈ ಹಿಂದೆ ಯಾವ ರೀತಿ ಕೆಲಸ ಮಾಡಿದೆ ಎಂಬುದು ಗೊತ್ತಿದೆ. ಜತೆಗೆ ಎಸ್ಐಟಿಗೆ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದರೆ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕಾಗುತ್ತದೆ. ಎಫ್ಐಆರ್ ದಾಖಲಾಗಬೇಕು. ಒಂದು ಬಾರಿ ಎಫ್ಐಆರ್ ದಾಖಲಾದರೆ ಅದು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ. ಜತೆಗೆ ತನಿಖಾ ವರದಿಯನ್ನು ನಿಮಗೆ ಸಲ್ಲಿಸುವ ಅಗತ್ಯವೇ ಇರುವುದಿಲ್ಲ. ಹೀಗಾಗಿ ಇಡೀ ಪ್ರಕರಣ ನಿಮ್ಮ ನಿಯಂತ್ರಣದಿಂದ ಹೊರ ಹೋಗುತ್ತದೆ. ಜತೆಗೆ ನ್ಯಾಯಾಲಯದಲ್ಲಿ ಈ ತನಿಖೆಗೆ ತಡೆ ತರುವ ಅವಕಾಶವೂ ಇರುತ್ತದೆ. ಹಾಗಾಗಿ 15 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎನ್ನುವ ಉದ್ದೇಶ ಈಡೇರುವುದು ಕಷ್ಟ ಎಂದರು.

ನಿಮ್ಮ ಮೇಲೆ ಇಡೀ ಸದನ ವಿಶ್ವಾಸ ವ್ಯಕ್ತಪಡಿಸಿದೆ. ಹೀಗಿರುವಾಗ ನೀವು ಅನಗತ್ಯವಾಗಿ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿ ಯಾರೋ ಕೈಗೆ ಅಸ್ತ್ರ ಕೊಟ್ಟು ನಮ್ಮನ್ನು ಬಲಿ ಮಾಡುವ ಪ್ರಯತ್ನ ಬೇಡ. ಎಸ್ಐಟಿಗೆ ಯಾರನ್ನೋ ಸಮನ್ ಮಾಡುವ ಅಧಿಕಾರವೇ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಕೈ ಬಿಡಿ, ಇಲ್ಲದಿದ್ದರೆ ಸದನ ಸಮಿತಿಗೆ ಒಪ್ಪಿಸಿ ಎಂದು ಮಾಧುಸ್ವಾಮಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಹಲವು ವರ್ಷಗಳ ನಿಮ್ಮ ಆತ್ಮೀಯರಾಗಿ ಕೈ ಮುಗಿದು ಹೇಳುತ್ತಿದ್ದೇನೆ, ಎಸ್ಐಟಿ ತನಿಖೆಯಿಂದ ಉದ್ದೇಶ ಈಡೇರುವುದಿಲ್ಲ. ಬದಲಾಗಿ ಯಾರಿಗೋ ಅಸ್ತ್ರ ಕೊಟ್ಟಂತಾಗುತ್ತದೆ. ಸದನದಲ್ಲಿರುವ ಶೇ. 60 ರಷ್ಟು ಸದಸ್ಯರು ಪೊಲೀಸ್ ಕಿರುಕುಳ ಅನುಭವಿಸಿದ್ದಾರೆ. ನಿಮಗೂ ಅದು ಗೊತ್ತಿದೆ. ಪೊಲೀಸರ ಜತೆ ದೋಸ್ತಿಯೂ ಬೇಡ, ದುಷ್ಮನಿಯೂ ಬೇಡ ಎಂಬ ಮಾತಿದೆ. ಹಾಗಾಗಿ ತಮ್ಮ ತೀರ್ಪನ್ನು ಪುನರ್ ಪರಿಶೀಲಿಸಿ ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ ಎಂದು ಮಾಧುಸ್ವಾಮಿ ಹೇಳಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಬೋಪಯ್ಯ ಅವರು, ಈ ಆಡಿಯೋ ಯಾರದೋ ಮಧ್ಯೆ ನಡೆದಿತ್ತು. ಅದನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಸಾರ್ವಜನಿಕಗೊಳಿಸಿದ್ದು ಮುಖ್ಯಮಂತ್ರಿಗಳು. ಅವರ ಉದ್ದೇಶ ಏನಿತ್ತೋ. ಹಾಗಾಗಿ ಈ ಪ್ರಕರಣದಲ್ಲಿ ಅವರು ಭಾಗಿದಾರರು. ಅವರ ಅಧೀನದಲ್ಲೇ ಬರುವ ಎಸ್ಐಟಿಯಿಂದ ತನಿಖೆ ನಡೆಸುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಬೋಪಯ್ಯರವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ಈ ಪ್ರಕರಣವನ್ನು ಹೊರ ತಂದಿರುವ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಗಾದೆ ಎತ್ತಿದರು.

ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆಗ ಸಭಾಧ್ಯಕ್ಷರು ಎಲ್ಲರೂ ಒಟ್ಟಿಗೆ ಮಾತನಾಡುವುದು ಬೇಡ, ಎಲ್ಲರಿಗೂ ಅವಕಾಶ ಕೊಡುತ್ತೇನೆ, ತಾಳ್ಮೆ ಇರಲಿ ಎಂದು ಹೇಳಿ ಸದನವನ್ನು ಗದ್ದಲದಿಂದ ನಿಯಂತ್ರಿಸಿದರು.

ಮತ್ತೆ ಮಾತು ಮುಂದುವರೆಸಿದ ಬೋಪಯ್ಯನವರು, ಸಭಾಧ್ಯಕ್ಷರೆ ದಯಮಾಡಿ ನಿಮ್ಮ ತೀರ್ಪನ್ನು ಪುನರ್ ಪರಿಶೀಲಿಸಿ ಎಂದು ಮನವಿ ಮಾಡಿ, ನಿಮ್ಮ ಮೇಲೆ ಇಡೀ ಸದನ ನಂಬಿಕೆ ಇಟ್ಟಿದೆ. ಸದನದ ಮಾತು ಎಂದರೆ ಕರ್ನಾಟಕದ ಮಾತು ಇದ್ದಂತೆ. ಆಡಿಯೋ ಬಗ್ಗೆ ತನಿಖೆ ನಡೆಸಬೇಕು ಎಂದಾದರೆ ಸದನ ಸಮಿತಿಯಿಂದ ತನಿಖೆ ಆಗಲಿ ಎಂದು ಅವರು ಹೇಳಿದರು.

ಬೋಪಯ್ಯನವರ ಮಾತಿಗೆ ದನಿಗೂಡಿಸಿದ ಶ್ರೀರಾಮುಲು ಸಹ ಸಭಾಧ್ಯಕ್ಷರಿಗೆ ಅವರ ರೂಲಿಂಗ್‌ನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದರು.

ಬಿಜೆಪಿಯ ಸುರೇಶ್‌ಕುಮಾರ್ ಮಾತನಾಡಿ, ಸದನ ಜನತಾ ನ್ಯಾಯಾಲಯ ಇದ್ದಂತೆ. ಈ ನ್ಯಾಯಾಲಯದಲ್ಲಿ ನಿಮ್ಮ ಮೇಲಿನ ಆರೋಪಗಳನ್ನು ಒಪ್ಪಿಲ್ಲ. ಹೀಗಿರುವಾಗ ಮತ್ತೆ ತನಿಖೆ ಅಗತ್ಯ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಈ ತನಿಖೆಯಿಂದ ದ್ವೇಷದ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಮ್ಮ ಪಕ್ಷದ ಸದಸ್ಯರಾದ ರಾಜೇಶ್‌ನಾಯಕ್ ಅವರು ಮಂಗಳೂರಿನಿಂದ ವಿಮಾನದಲ್ಲಿ ಬರುವಾಗ ಅವರ ಪಕ್ಕದಲ್ಲಿ ಕುಳಿತಿದ್ದ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೊಬ್ಬರು ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಯುವುದು ನಿಶ್ಚಿತ ಎಂದು ಹೇಳಿದ್ದರು. ಇದನ್ನು ನೋಡಿದರೆ ಆಡಳಿತ ಪಕ್ಷದವರು ಮೊದಲೇ ಚಿಂತನೆ ನಡೆಸಿದ್ದಾರೆ ಎಂಬುದು ತಿಳಿಯುತ್ತಿದೆ ಎಂದರು.

ಈ ಪ್ರಕರಣ ಕುರಿತು ಎಸ್ಐಟಿ ತನಿಖೆ ಉತ್ತಮ ಅನಿಸುವುದಿಲ್ಲ. ನಿಮ್ಮ ತೀರ್ಪನ್ನು ಪುನರ್ ಪರಿಶೀಲಿಸಿ, ಒಂದು ವೇಳೆ ತನಿಖೆ ನಡೆಸುವುದಾದರೆ ನಾವೇ ಸದನದಲ್ಲಿ ರೂಪಿಸಿರುವ ಹಕ್ಕುಚ್ಯುತಿಗೆ ವಹಿಸಿ. ಹಕ್ಕುಚ್ಯುತಿ ಸಮಿತಿಯನ್ನು ಪಕ್ಕಕ್ಕೆ ಸರಿಸುವುದು ಆ ಸಮಿತಿಗೆ ಅಗೌರವ ತೋರಿದಂತಾಗುತ್ತದೆ ಎಂದರು.

ವಿರೋಧ ಪಕ್ಷದವರ ಮಾತಿಗೆ ಪ್ರತಿಕ್ರಿಯಿಸಿದ ಆರ್.ವಿ. ದೇಶಪಾಂಡೆಯವರು, ನಿನ್ನೆ ಸದನದಲ್ಲಿ ಈ ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈ ಪ್ರಕರಣವನ್ನು ಎಸ್ಐಟಿಗೆ ವಹಿಸುವ ತೀರ್ಮಾನವನ್ನು ನೀವು ಮಾಡಿದ್ದೀರಿ. ಇದಕ್ಕೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ.

ಹೀಗಿರುವಾಗ ದ್ವೇಷದ ರಾಜಕಾರಣ ಹೇಗೆ ಬರುತ್ತದೆ. ಪೊಲೀಸ್ ಸಹ ಈ ಸಮಾಜದ ಭಾಗ. ಎಲ್ಲದರ ಮೇಲೆ ನಂಬಿಕೆ ಹೊಂದಿರಬೇಕು. ರಾಜ್ಯದಲ್ಲಿ ಧೈರ್ಯವಂತ ಪೊಲೀಸ್ ಅಧಿಕಾರಿಗಳಿದ್ದಾರೆ. ಹಾಗಾಗಿ ಎಸ್ಐಟಿ ತನಿಖೆಯೇ ಸರಿ. ಈ ತೀರ್ಮಾನವನ್ನು ಬದಲಾಯಿಸುವುದು ಬೇಡ. ಇದಕ್ಕೆ ಶಿವಲಿಂಗೇಗೌಡರು ಸಹ ದನಿಗೂಡಿಸಿದರು.

Leave a Comment