ಮುಖ ತಿರುಗಿಸಿದ ಗಾಂಧಿಜೀ ಹಳೇ ನೋಟಿನದ್ದೇ ಕಥೆ

ಖ್ಯಾತ ನಿರ್ದೇಶಕ ರಾಜಮೌಳಿ ಅವ್ರು ಒಂದು ನೋಣವನ್ನು ಇಟ್ಟಿಕೊಂಡು ‘ಈಗ’ದಂತಹ ಸಿನೆಮಾ ಮಾಡ್ತಾರೆಂದರೆ ೫೦೦ ರೂ ನೋಟನ್ನು ಇಟ್ಟುಕೊಂಡು ಯಾಕೆ ಸಿನೆಮಾ ಮಾಡಬಾರದು ಎಂದು ಯೋಚಿಸಿಯೇ ‘೫ಜಿ’(ಫಿಫ್ತ್ ಜನರೇಶನ್) ಚಿತ್ರ ಮಾಡಿರೋದು” ಮೊದಲನೇ ಚಿತ್ರಕ್ಕೆ ತಮ್ಮನ್ನು ತಾವು ರಾಜಮೌಳಿ ಮಟ್ಟಕ್ಕೆ ಹೋಲಿಸಿಕೊಳ್ಳುವ ಹೊಸ ನಿರ್ದೇಶಕ ಗುರುವೇಂದ್ರ ಧೈರ್ಯವನ್ನು ಮೆಚ್ಚಲೇಬೇಕು.

ಜನ ಈಗಾಗಲೇ ಉತ್ತಮ ಪ್ರತಿಕ್ರಿಯೆ ನೀಡಿರುವ ಚಿತ್ರದ ಟ್ರೇಲರ್‌ನಂತೆ ಚಿತ್ರವೂ ಉತ್ತಮವಾಗಿರುತ್ತದೆ ಎನ್ನುವಂಥ ಖಾತರಿಯನ್ನೂ ಅವರು ಕೊಡುತ್ತಾರೆ. ಅವರು ಚಿತ್ರ ಶುರುಮಾಡಿದಾಗ ೫೦೦ರ ನೋಟು ಅಮಾನ್ಯಗೊಂಡಿರಲಿಲ್ಲ. ೫೦೦ರ ಒಂದು ನೋಟಿನಲ್ಲಿ ಮಾತ್ರವೇ ಗಾಂಧೀಜಿ ಮುಖ ನೇರವಾಗಿ ಮುದ್ರಣಗೊಂಡಿದ್ದು ಅವರಿಗೆ ನಿಜವಾಗಿಯೇ ಸಿಕ್ಕಿದೆಯಂತೆ. ೧೧೧೨೨ ಸಂಖ್ಯೆಯನ್ನು ಹೊಂದಿರುವ ಆ ನೋಟೇ ಕಥೆಯಾಗುತ್ತಾ ಹೋಗುತ್ತದೆ. ಹಾಗೆ ಗಾಂಧೀಜಿಯ ಮುಖ, ಅದರಲ್ಲಿ ಬರೆದಿರುವ ಸತ್ಯಮೇವ ಜಯತೇ ಎನ್ನುವಂತ ಒಂದೊಂದು ಅಂಶಗಳು ಚಿತ್ರಕ್ಕೆ ಕಥೆಯಾಗಿದೆ. ಚಿತ್ರದ ನಾಯಕ, ನಾಯಕಿಯನ್ನು ಬಿಟ್ಟರೆ ಚಿತ್ರದಲ್ಲಿ ನಟಿಸಿರುವ ಸುಮಾರು ೫೦ ರಂಗಭೂಮಿ ಕಲಾವಿದರು ಪ್ರತಿಯೊಬ್ಬರು ಒಂದು ಸೀನ್‌ನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ.

ಆದರೆ ಇಡೀ ಸಿನೆಮಾ ನೋಟು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವಂಥ ವಿವರಗಳನ್ನು ನೀಡಿದ ಅವರು ಕನ್ನಡ ಪ್ರೇಕ್ಷಕರಿಂದ ಹೊಸ ಪ್ರಯೋಗಾತ್ಮಕ ಚಿತ್ರಗಳಿಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ಧೈರ್ಯಮಾಡಿ ಈ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು.

‘೫ಜಿ’ ಗಾಂಧೀಜಿ ನಂತರದ ೫ನೇ ತಲೆಮಾರಿನ ಅಂದರೆ ಪ್ರಸ್ತುತದ ಚಿತ್ರವಾಗಿದ್ದು ಕಾರ್ಯಾಂಗ, ಶಾಸಕಾಂಗ, ತಂತ್ರಜ್ಞಾನ ಎಲ್ಲವನ್ನೂ ಒಳಗೊಂಡಿದೆ ರಂಜನೆಯೇ ಮುಖ್ಯವಾಗಿ ಸಾಗುತ್ತಿದ್ದರೂ ಒಳ ಹರಿವಾಗಿ ಒಂದು ಸಂದೇಶವಿರುತ್ತದೆ ಎನ್ನುವ ಕುತೂಹಲವನ್ನು ಅವರು ಹುಟ್ಟಿಹಾಕಿದ್ದಾರೆ.

ನಿರ್ದೇಶರು ಹೇಳುವಂತೆ ಬಿಜಿ ಇರುವ ನಿರುದ್ಯೋಗಿ ಯುವಕನ ಪಾತ್ರ ನಿಭಾಯಿಸಿರುವ ಪ್ರವೀಣ್ ತಮ್ಮದು ಹೀರೋ ಅನ್ನೋದಕ್ಕಿಂತ ಪ್ರಮುಖವಾದ ಪಾತ್ರ. ಆ ಪಾತ್ರವೇ ನಗುಹುಟ್ಟಿಸುತ್ತೆ ಎನ್ನುವ ವಿವರ ನೀಡುವ ಜೊತೆಗೆ ಹೊಸ ಪ್ರಯತ್ನದ ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಜನ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಇಟ್ಟಿದ್ದಾರೆ.

ತನಗೆ ಈ ರೀತಿಯ ಬ್ರಿಜ್ ಸಿನೆಮಾದಲ್ಲಿ ನಟಿಸಬೇಕೆನ್ನುವು ಆಸೆ ತುಂಬಾ ದಿನದಿಂದ ಇತ್ತು ಎಂದು ಹೇಳಿದ ನಿಧಿಸುಬ್ಬಯ್ಯ ತಕ್ಷಣ ಬ್ರಿಜ್ ಎಂದಿದ್ದನ್ನು ಸರಿಪಡಿಸಿಕೊಂಡು ನಿರ್ದೆಶಕರು ಹೇಳಿದಂತೆ ಇದೊಂದು ಕಮರ್ಷಿಯಲ್ ಸಿನೆಮಾ ಎಂದರು. ತನ್ನ ಪಾತ್ರ ಮಾಧ್ಯಮ ಪ್ರತಿನಿಧಿಯದಾಗಿದ್ದು ಸತ್ಯವನ್ನೇ ಚಾನೆಲ್‌ನಲ್ಲಿ ತೋರಿಸಲು ತನ್ನ ಇಷ್ಟಪಡುತ್ತಿರುತ್ತದೆ ಎನ್ನುವ ತನಕ ಚೆನ್ನಾಗಿಯೇ ಮಾತನಾಡಿದ್ದ ಅವರು, ಆನಂತರ ನೋಟು ಅಮಾನ್ಯವಾಗುತ್ತೆ ಅನ್ನೋದು ತನಗೆ ಮೊದಲೇ ಗೊತ್ತಿತ್ತು.

ಮುಂದೆ ಏನಾಗುತ್ತೆದೆಂದು ಗೊತ್ತಾಗುವ ‘ಸೈಕಿಕ್ ಪವರ್ ಇದೆ ಅಂತೆಲ್ಲ ಏನೇನೊ ಸಂಬಂಧವಿಲ್ಲದ ಅರ್ಥವಿಲ್ಲದೆ ಮಾತಾಡಿದರು. ಬಹುಶಃ ಸಧ್ಯದಲ್ಲೇ ಮದುವೆಯಾಗುತ್ತಿರುವ ಖುಷಿಗೆ ಏನೆಲ್ಲಾ ಮಾತನಾಡುತ್ತಿದ್ದಾರಾ? ಅವರೇ ಹೇಳಬೇಕು. ಅಂದಹಾಗೆ ಮದುವೆ ನಂತರವೂ ನಿಧಿ ನಟಿಸುವ ಆಸೆಯನ್ನಿಟ್ಟುಕೊಂಡಿದ್ದಾರೆ. ನಿರ್ಮಾಪಕ ಜಗದೀಶ್ ನಿರ್ದೇಶಕರು ೫೦೦ ರುಪಾಯಿಗೆ ಜೀವ ತುಂಬುತ್ತೇನೆ ಎಂದಿದ್ದರಿಂದ ಸಿನೆಮಾ ಮಾಡಿದ್ದಾಗಿ ಹೇಳಿದ್ದಾರೆ. ಚಿತ್ರತಂಡದ ಪ್ರಕಾರ ‘೫ಜಿ’ ಹೊಸತನದ ಚಿತ್ರವಾಗಿ  ಉತ್ತಮವಾಗಿ ಮೂಡಿಬಂದಿದೆ. ಫೆ. ೧೦ರಂದು ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಿರುವುದನ್ನು ತಿಳಿಸಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.

Leave a Comment