ಮುಖ್ಯಶಿಕ್ಷಕನಿಂದ ಶಿಕ್ಷಕಿಯ ಅತ್ಯಾಚಾರ! ಉಪ್ಪಿನಂಗಡಿ ಠಾಣೆಗೆ ದೂರು, ಪೊಲೀಸರಿಂದ ತನಿಖೆ

ಮಂಗಳೂರು, ನ.೧೧- ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದ ವಿದ್ಯಾದೇಗುಲದಲ್ಲೇ ಮುಖ್ಯಶಿಕ್ಷಕನೋರ್ವ ಅತಿಥಿ ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಬೆಳ್ತಂಗಡಿ ತಾಲೂಕು ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್(೪೧) ವಿರುದ್ಧ ಶಿಕ್ಷಕಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಠಾಣಾ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಘಟನೆಯ ವಿವರ:

ಘಟನೆ ನಡೆದು ೭ ತಿಂಗಳ ಬಳಿಕ ದೂರು ಸಲ್ಲಿಕೆಯಾಗಿದೆ. ಪದ್ಮುಂಜ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವತಿ ದೂರು ನೀಡಿದ್ದು ಕಳೆದ ಏ.೧೪ರ ಅಂಬೇಡ್ಕರ್ ಜಯಂತಿಯ ದಿನ ತನ್ನ ಕೆಲಸವನ್ನು ಖಾಯಂ ಮಾಡುವುದಾಗಿ ಆಮಿಷವನ್ನೊಡ್ಡಿ ಮುಖ್ಯಶಿಕ್ಷಕ ಮಂಜುನಾಥ್ ತನ್ನ ಮೇಲೆ ಶಾಲೆಯ ಕೊಠಡಿಯಲ್ಲೇ ಅತ್ಯಾಚಾರವೆಸಗಿದ್ದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ತಾನು ಬೆದರಿ ತಕ್ಷಣಕ್ಕೆ ಪೊಲೀಸರಿಗೆ ದೂರು ನೀಡಿರಲಿಲ್ಲವೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಕಾರಣದಿಂದ ಅತಿಥಿ ಶಿಕ್ಷಕಿಯನ್ನು ಕೈಬಿಡಲಾಗಿದ್ದು ತನ್ನ ಬದಲು ಬೇರೆ ಶಿಕ್ಷಕಿಯನ್ನು ನೇಮಿಸಲಾದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರ ವಿರುದ್ಧ ಸುಳ್ಳು ದೂರು ನೀಡಿರುವ ಆರೋಪ ಕೂಡಾ ಕೇಳಿಬಂದಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು ಸಂತ್ರಸ್ತ ಯುವತಿಯನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷಾ ಫಲಿತಾಂಶವನ್ನು ಆಧರಿಸಿ ಆರೋಪಿ ಮುಖ್ಯಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment