ಮುಖ್ಯವಾಹಿನಿಗೆ ಬರಲು ಕಾಶ್ಮೀರ ಜನತೆಗೆ ಅವಕಾಶ-ನಡ್ಡಾ

ಬೆಂಗಳೂರು, ಸೆ. ೨೨- ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಹಾಗೂ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾ‌ಡುವ ಐತಿಹಾಸಿಕ ತೀರ್ಮಾನವನ್ನು ಕೇಂದ್ರದ ಬಿಜೆಪಿ ಸರ್ಕಾರ ಕೈಗೊಂಡಿದೆ. ಈ ಮೂಲಕ ಜಮ್ಮು-ಕಾಶ್ಮೀರದ ಜನ ಮುಖ್ಯವಾಹಿನಿಯಲ್ಲಿ ಬೆರೆಯುವ ವಾತಾವರಣವನ್ನು ಸೃಷ್ಠಿ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಇಂದು ಆಯೋಜಿಸಿದ್ದ 370ನೇ ವಿಧಿ ಬಗೆಗಿನ ಜನಜಾಗರಣಾ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ರದ್ದು ಮಾ‌ಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಧಾನಿ ನರೇಂದ್ರಮೋದಿ ತೋರಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರದ ಜನರ ಸಂತೋಷಕ್ಕೆ ಕಾರಣವಾಗಿದ್ದಾರೆ ಎಂದರು.
ಈ ವಿಧಿ ರದ್ಧತಿಯಿಂದ 2ನೇ ದರ್ಜೆ ನಾಗರಿಕರಾಗಿ ಬಾಳುತ್ತಿದ್ದ ಜಮ್ಮು-ಕಾಶ್ಮೀರದ ನಾಗರಿಕರಲ್ಲಿ ಹೆಚ್ಚು ಸಂತಸ ಮೂಡಿದೆ. ಇನ್ನು ಮುಂದೆ ಅವರು ದೇಶದ ಮುಖ್ಯವಾಹಿನಿಯಲ್ಲಿ ಬೆರೆಯಲಿದ್ದಾರೆ ಎಂದರು.
ಸಂವಿಧಾನದ 370ನೇ ವಿಧಿ ರದ್ಧತಿಯಿಂದ ಜಮ್ಮು-ಕಾಶ್ಮೀರದ ಪರಿಶಿಷ್ಟ ಜಾತಿ-ವರ್ಗ, ಬುಡಕಟ್ಟು ಸಮುದಾಯದವರಿಗೂ ರಾಜಕೀಯ ಮೀಸಲಾತಿ ಸಿಗಲಿದೆ. ಎಲ್ಲ ಸಮುದಾಯದವರಿಗೂ ಕಾಶ್ಮೀರಿಗಳಂತೆ ಸಮಾನ ಹಕ್ಕುಗಳು ಸಿಗುತ್ತವೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಸ್ವತಂತ್ರಾ ನಂತರ ನೆಲೆಸಿದ್ದ ಪೂರ್ವ ಪಾಕಿಸ್ತಾನದವರಿಗೆ, ಗುಜ್ಜಾರ್ ಸಮುದಾಯದವರಿಗೆ ಯಾರಿಗೂ ಹಕ್ಕುಗಳೇ ಇಲ್ಲದಂತಾಗಿದ್ದು, ಈ ವಿಧಿ ರದ್ಥತಿಯಿಂದ ಎಲ್ಲರಿಗೂ ಅವರ ಹಕ್ಕುಗಳು ಸಿಗಲಿದೆ. ಜತೆಗೆ ದೇಶದ ಕಾನೂನುಗಳು ಕಾಶ್ಮೀರದಲ್ಲಿ ಜಾರಿಯಾಗುತ್ತವೆ ಎಂದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ಕೇಂದ್ರ ಸರ್ಕಾರ ಕೈಗೊಂಡ ರಣ ನೀತಿಗಳನ್ನು ಸಭೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಈ ವಿಧಿ ರದ್ಧತಿಯಿಂದ ಜಮ್ಮು-ಕಾಶ್ಮೀರದ ಮೂರು ಕುಟುಂಬ ಕಣ್ಣೀರಿಟ್ಟಿದ್ದನ್ನು ಬಿಟ್ಟರೆ ದೇಶದ 12 5 ಕೋಟಿ ಜನ ಖುಷಿ ಪಟ್ಟಿದ್ದಾರೆ ಎಂದರು.
ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಸಹ ಕಾಶ್ಮೀರಕ್ಕೆ 370ನೇ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ನೀಡುವುದಕ್ಕೆ ವಿರೋಧವಾಗಿದ್ದರು ಎಂಬುದನ್ನು ಜೆ.ಪಿ ನಡ್ಡಾ ನೆನಪು ಮಾಡಿಕೊಂಡರು.
ಜಮ್ಮು-ಕಾಶ್ಮೀರ ಇನ್ನು ಮುಂದೆ ಭಾರತದ ಅವಿಭಾಜ್ಯ ಅಂಗವಾಗಿ ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ಇತರ ರಾಜ್ಯಗಳಂತೆ ಅಭಿವೃದ್ಧಿಯನ್ನು ಕಾಣಲಿದೆ ಎಂದು ಅವರು ಹೇಳಿದರು.
ಇಂದು ಬಸವಣ್ಣನವರ ಪುಣ್ಯಭೂಮಿ ಹಾಗೂ ಕೆಂಪೇಗೌಡರ ಕರ್ಮ ಭೂಮಿಗೆ ಬಂದು ಸಂವಿಧಾನದ 370ನೇ ವಿಧಿ ರದ್ಧತಿಯಿಂದ ದೇಶಕ್ಕಾದ ಅನುಕೂಲಗಳ ಬಗ್ಗೆ ಮಾತನಾಡುವ ಸೌಭಾಗ್ಯ ಸಿಕ್ಕಿದೆ. 370ನೇ ವಿಧಿ ರದ್ಧತಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಹಬ್ಬಿಸಲಾಗಿತ್ತು ಎಂದರು.
370 ಅನ್ನೋದು ಕಾಶ್ಮೀರದ ಜತೆ ಅಂಟಿಕೊಂಡಿತ್ತು. ಈಗ ಅದನ್ನು ಪ್ರಧಾನಿ ಮೋದಿ ಅವರು ಬಿಡಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಜಗಜ್ಜಾಹೀರಾಗಿದೆ ಎಂದರು.
ಸಂವಿಧಾನದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಭಾರತದ ತೀರ್ಮಾನ ಆ ದೇಶದ ಆಂತರಿಕ ವಿಷಯವೇ ಹೊರತು, ಅಂತರರಾಷ್ಟ್ರೀಯ ವಿಷಯವಲ್ಲ ಎಂದು ಜಗತ್ತಿನ 100ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿದ್ದು, ಪ್ರಧಾನಿ ನರೇಂದ್ರಮೋದಿ ಅವರ ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಜೆ.ಪಿ ನಡ್ಡಾ ಹೇಳಿದರು.
ಕಳಂಕ ತಪ್ಪಿತು
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ ಅವರು, ಸ್ವಾತಂತ್ರ್ಯಾ ನಂತರ ದೇಶಕ್ಕೆ ಇದ್ದ ದೊಡ್ಡ ಕಪ್ಪು ಚುಕ್ಕೆ ಆರ್ಟಿಕಲ್ -370 ಇದನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತೊಡೆದು ಹಾಕಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮಾತನಾಡಿ, ಸಂವಿಧಾನದ 370ನೇ ವಿಧಿ ರದ್ಧತಿಯನ್ನು ವಿರೋಧಿಸುತ್ತಿರುವವರು ದೇಶ ವಿರೋಧಿಗಳು, ದೇಶ ಭಕ್ತರು ಈ ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಿದ್ದಾರೆ ಎಂದರು.
ಈ ಜನಜಾಗರಣಾ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ವಿ. ಸೋಮಣ್ಣ, ಸಂಸದರಾದ ಪಿ.ಸಿ ಮೋಹನ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಪ್ರಧೀನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಎನ್ ರವಿಕುಮಾರ್, ಮುಖಂಡರುಗಳಾದ ಮುನಿರಾಜು, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Comment