ಮುಖ್ಯಮಂತ್ರಿ ವಾಸ್ತವ್ಯ : ಕರೇಗುಡ್ಡ ಗ್ರಾಮ – ಆರಂಭಗೊಳ್ಳದ ಪೂರ್ವ ಸಿದ್ಧತೆ

* ಉಸ್ತುವಾರಿ ಸಚಿವ, ಶಾಸಕರ ಆಕ್ರೋಶ – ಕ್ಯಾರೆ ಎನ್ನದ ಅಧಿಕಾರಿಗಳು
ರಾಯಚೂರು.ಜೂ.19- ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ತಿಂಗಳು ದಿನಾಂಕ 26 ರಂದು ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ವಾಸ್ತವ್ಯ ನಡೆಸಲಿದ್ದಾರೆ.
ಅಂದು ಮುಂಜಾನೆಯಿಂದ ರಾತ್ರಿ 9 ಗಂಟೆವರೆಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆ ಬಗ್ಗೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿಗಳ ವಾಸ್ತವ್ಯದ ಹಿನ್ನೆಲೆ, ಕರೇಗುಡ್ಡ ಗ್ರಾಮದಲ್ಲಿ ಪೂರ್ವ ಸಿದ್ಧತೆ ಕಾರ್ಯಕ್ರಮಗಳಿಗೆ ಸೂಚಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಮುಖ್ಯಮಂತ್ರಿ ಕಾರ್ಯಕ್ರಮದ ಬಗ್ಗೆಯೇ ಜಿಲ್ಲೆಯ ಅಧಿಕಾರಿಗಳಲ್ಲಿರುವ ಅಸಡ್ಡೆಗೆ ಇದು ನಿದರ್ಶನವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಲಿದ್ದಾರೆ.
ಸುಮಾರು 5 ರಿಂದ 6 ಸಾವಿರ ಜನರ ಅಹವಾಲು ಆಲಿಸಲಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ದಂಡೆ ಜೂ.26 ರಂದು ಕರೇಗುಡ್ಡದಲ್ಲಿ ಬೀಡು ಬೀಳಲಿದೆ. ಇದಕ್ಕಾಗಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುವುದು ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟಿಯನ್ನೇ ನೀಡಿದರೂ, ಈ ಪಟ್ಟಿಯನ್ವಯ ಇಲ್ಲಿವರೆಗೂ ಯಾವುದೇ ಕಾಮಗಾರಿ ಆರಂಭಗೊಳ್ಳದಿರುವುದು ಅಧಿಕಾರಿ ವರ್ಗ ಜಡತ್ವಕ್ಕೆ ಮಾದರಿಯಾಗಿದೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರು ಕೈಗೊಂಡ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯೆ ಬಗ್ಗೆ ಸ್ವತಃ ಸಚಿವರಾದ ವೆಂಕಟರಾವ್ ನಾಡಗೌಡ ಮತ್ತು ಜಾದಳ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ನಿಮ್ಮಿಂದ ಕೆಲಸ ಮಾಡಲು ಸಾಧ್ಯವಾಗದಿದ್ದರೇ ಹೇಳಿ, ನಾವೇ ಎಲ್ಲಾ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುವ ಮಟ್ಟಕ್ಕೆ ಸಿಡಿಮಿಡಿಗೊಂಡಿರುವುದು ಜಿಲ್ಲಾಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ರಾಜ್ಯದ ದೊರೆ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಗಳಲ್ಲೊಂದಾದ ಈ ವಾಸ್ತವ್ಯ ಕಾರ್ಯಕ್ರಮಕ್ಕೆ ಈಗಾಗಲೇ ರಾಜ್ಯ ಮೇಲಾಧಿಕಾರಿಗಳಿಂದಲೂ ಸ್ಪಷ್ಟ ಸೂಚನೆ ಬಂದಿವೆ. ಜೂ.10 ರಂದು ಸಚಿವರು ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ, ಯಾವ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಲಾಗಿತ್ತು. ಆದರೆ, 9 ದಿನ ಕಳೆದರೂ, ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಮುಖ್ಯಮಂತ್ರಿ ಕಾರ್ಯಕ್ರಮದ ಬಗ್ಗೆ ಅಧಿಕಾರಿಗಳು ಗಂಭೀರವಾಗಿಲ್ಲ ಎನ್ನುವುದಕ್ಕೆ ಸೂಚಕವೇ?.
ಈ ಪೂರ್ವ ಜೂ.28 ರ ಮುಖ್ಯಮಂತ್ರಿ ಕಾರ್ಯಕ್ರಮ ಈಗ ಎರಡು ದಿನಗಳ ಮುಂಚಿತವಾಗಿ ಕೈಗೊಳ್ಳಲಾಗುತ್ತಿದೆ. ಇನ್ನೂ ಆರು ದಿನಗಳು ಮಾತ್ರ ಪೂರ್ವ ಸಿದ್ಧತೆಗೆ ಅವಕಾಶವಿದೆ. ಆದರೆ, ಇನ್ನೂವರೆಗೂ ಯಾವುದೇ ಪೂರ್ವ ಸಿದ್ಧತೆ ಕೈಗೊಳ್ಳದ ಅಧಿಕಾರಿ ವರ್ಗ ರಾಜ್ಯ ಸರ್ಕಾರದ ಅಧೀನದಲ್ಲಿದ್ದಾರೆಯೇ ಅಥವಾ ತಮ್ಮದೇಯಾದ ವ್ಯವಸ್ಥೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸುವಂತಹ ಸಂದರ್ಭ ಜಿಲ್ಲೆಯಲ್ಲಿ ಉಂಟಾಗಿದೆ.
ನಿನ್ನೆ ಸಭೆಯಲ್ಲಿ ಸಚಿವರು, ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಏಕಾಏಕಿ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪೂರ್ವ ಸಿದ್ಧತೆಗೆ ತೀವ್ರತೆಗೆ ಸೂಚಿಸಲಾಗಿದೆ. ಆದರೆ, ಈ ಸೂಚನೆಯನ್ನಾದರೂ ಸ್ಥಳೀಯ ಅಧಿಕಾರಿಗಳು ಪಾಲಿಸುತ್ತಾರೆಯೇ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ.

Leave a Comment