ಮುಕ್ತ ವ್ಯಾಪಾರ ಒಪ್ಪಂದ ಹೈನುಗಾರಿಕೆಗೆ ಮಾರಕ: ಸಿದ್ದು

ಬೆಂಗಳೂರು, ಅ. ೨೩- ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ರಿಸೆಪ್) ಅಡಿಯಲ್ಲಿ ನ‌ಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಅಂದಾಜು 86 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ದೇಶದಲ್ಲಿ 10 ಕೋಟಿ ರೈತರ ಬದುಕು ಹೈನುಗಾರಿಕೆ ಅವಲಂಬಿಸಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ ರಿಸೆಪ್ ರೈತರನ್ನು ಬೀದಿಪಾಲು ಮಾಡಲಿದೆ. ನರೇಂದ್ರ ಮೋದಿ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣ ಶಾಸನವಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಡಿ ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದದಿಂದ ಹೈನುಗಾರಿಕೆ ಅಭಿವೃದ್ಧಿ ಅಸಾಧ್ಯ. ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಹೈನುಗಾರಿಕೆ ಅಭಿವೃದ್ಧಿಗಾಗಿ ಹಾಗೂ ಉತ್ತೇಜಿಸಲು ಕ್ಷೀರಭಾಗ್ಯ ಹಾಗೂ ಶಾಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿಡಲು ಈ ಯೋಜನೆ ಜಾರಿಗೆ ತರಲಾಗಿತ್ತು.
ಮೋದಿಯವರು ಸರ್ಕಾರ ಮತ್ತು ಶಾಲಾ ಮಕ್ಕಳ ಬದುಕು ಕಸಿಯಲು ಹೊರಟಿದ್ದಾರೆ. ಯುಪಿಎ ಸರ್ಕಾರಾವಧಿಯಲ್ಲಿ ರೆಸಿಪ್ ಕುರಿತಂತೆ ಮಾತುಕತೆಯಲ್ಲಿ ಭಾಗಿಯಾಗಿದ್ದು ನಿಜ. ಆದರೆ, ಪ್ರಧಾನಿ ಮನಮೋಹನ್ ಸಿಂಗ್ ದೇಶದ ಹಿತದೃಷ್ಟಿಯಿಂದ ಹಲವು ಬದಲಾವಣೆಗಳನ್ನು ಸೂಚಿಸಿದ್ದರು. ಮೋದಿ ಅವರು ಯಾವುದೇ ಬದಲಾವಣೆ ಕುರಿತು ಚಿಂತಿಸದೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ. ಇದರಿಂದ ಪಾರದರ್ಶಕತೆ ಎಲ್ಲಿದೆ? ಎಂದು ಕೇಳಿಕೊಳ್ಳುವಂತಾಗಿದೆ.
ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾಗಾಂಧಿ ಎಫ್‌ಟಿಎ ವಿರೋಧಿಸಲು ಕರೆ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

Leave a Comment