ಮುಂಬೈ ಸರಣಿ ಸ್ಫೋಟ ಆರೋಪಿ ಪರಾರಿ

ನವದೆಹಲಿ, ಜ. ೧೭- ೧೯೯೩ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ (ಡಾ. ಬಾಂಬ್) ಜಲೀಸ್ ಅನ್ಸಾರಿ, ಪೆರೋಲ್‌ನಲ್ಲಿದ್ದಾಗ ನಾಪತ್ತೆಯಾಗಿದ್ದಾನೆ.
ಅವರ ಕುಟುಂಬದ ಸದಸ್ಯರು ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಅನ್ಸಾರಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ರಾಜಸ್ತಾನದ ಅಜ್ಮೀರ್ ಕೇಂದ್ರ ಕಾರಾಗೃಹದಿಂದ ೨೦ ದಿನಗಳ ಪೆರೋಲ್ ಮೇಲೆ ಹೊರಬಂದಿದ್ದ ಅನ್ಸಾರಿ, ಗುರುವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು, ಪೊಲೀಸರು, ಅನ್ಸಾರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಕೆಲ ಮಾಹಿತಿಗಳನ್ವಯ ಅನ್ಸಾರಿಯನ್ನು ಡಾ. ಬಾಂಬ್ ಎಂದು ಕರೆಯಲಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ ೧೦.೩೦ ರಿಂದ ೧೨ ಗಂಟೆಯ ನಡುವೆ ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಆತ ಹಾಜರಾತಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಅನ್ಸಾರಿ, ಪೊಲೀಸ್ ಠಾಣೆಗೆ ಭೇಟಿನೀಡಿಲ್ಲ. ಇದರಿಂದ ಅವನ ಪುತ್ರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ.
ಕುಟುಂಬದವರ ಮಾಹಿತಿ ಅನ್ವಯ ಅನ್ಸಾರಿ, ನಮಾಜ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಆದರೆ ಮನೆಗೆ ಹಿಂತಿರುಗಿಬಂದಿಲ್ಲ ಎಂದು ತಿಳಿಸಿದ್ದಾರೆ. ಅನ್ಸಾರಿ ೬೦ಕ್ಕೂ ಹೆಚ್ಚು ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದಾನೆ. ೨೦೦೮ರ ಜೈಪುರ್ ಸ್ಫೋಟದಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಗಿದೆ. ೧೯೯೩ರ ಮಾರ್ಚ್ ೧೨ ರಂದು ಮುಂಬೈ ನಡೆದ ಸರಣಿ ಸ್ಫೋಟಗಳಲ್ಲಿ ೨೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಹಾಗೂ ೭೧೩ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಅಪರಾಧಿ ಅನ್ಸಾರಿ, ನಿನ್ನೆಯಿಂದ ಪರಾರಿಯಾಗಿದ್ದಾನೆ.

Leave a Comment