ಮುಂಬರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಹಾರ್ದಿಕ್ ಪಾಂಡ್ಯ ಅನುಮಾನ

ನವದೆಹಲಿ, ಜ 28 -ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಸಂಪೂರ್ಣ ಚೇತರಿಸಿಕೊಂಡು ಟೀಮ್ ಇಂಡಿಯಾಗೆ ಮರಳಲು ಸಿದ್ದತೆಯಲ್ಲಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಸಂದ್ಯ ಭಾರತ ತಂಡಕ್ಕೆ ಹಿಂತಿರುಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಫಿಟ್ನೆಸ್ ಟೆಸ್ಟ್ ಪಾಸ್ ಮಾಡದ ಕಾರಣ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸಿರಲಿಲ್ಲ. ಇದಕ್ಕೂ ಮೊದಲು ಭಾರತ ‘ಎ’ ತಂಡದ ನ್ಯೂಜಿಲೆಂಡ್ ಪ್ರವಾಸದಿಂದಲೂ ಹಿಂಜರಿಯಬೇಕಾಯಿತು.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ, ಅಂದಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ಸದ್ಯ ಪುನಶ್ಚೇತನ ಹಂತದಲ್ಲಿರುವ ಪಾಂಡ್ಯ, ಮಾರ್ಚ್ ವೇಳೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿಗೆ ಹಿಂತಿರುಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಹಾಗೂ ಫಾರ್ಮ್‌ಗೆ ಮರಳಬೇಕಾಗಿರುವುದು ಅತಿ ಅಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2020ನೇ ಆವೃತ್ತಿಯು ನಿರ್ಣಾಯಕವೆನಿಸಿದೆ. ಕಳೆದ ವರ್ಷವೂ ಗಾಯದ ಸಮಸ್ಯೆ ಎದುರಿಸಿದ್ದ ಪಾಂಡ್ಯ, ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಹಾರ್ದಿಕ್ ಪಾಂಡ್ಯ ಇನ್ನಷ್ಟು ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಬೇಕಿದೆ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹ ಸ್ಪಷ್ಟಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲೂ ಭಾಗವಹಿಸುವ ಪ್ರಶ್ನೆಯೇ ಇಲ್ಲ ಎಂದರು.

Leave a Comment