ಮುಂಬಡ್ತಿಗಾಗಿ ಗ್ರಾಮಲೆಕ್ಕಿಗರ ಧರಣಿ

ದಾವಣಗೆರೆ.ಜು.17; ಗ್ರಾಮಲೆಕ್ಕಾಧಿಕಾರಿಗಳ ಕುಂದು ಕೊರತೆ ಆಲಿಸಬೇಕು ಮತ್ತು ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಮಲೆಕ್ಕಿಗರು ಲೇಖನಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಕಛೇರಿ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿದರು.
ಇತರೆ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಇಲಾಖೆಯ ನೌಕರರ ಮೇಲೆ ಹೇರಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಮನವಿ ಮಾಡಲಾಗಿತ್ತು ಆದರೂ ಸಹ ನಮ್ಮ ಮನವಿಗೆ ಸ್ಪಂದನೆ ದೊರೆತಿಲ್ಲವೆಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು. ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕೆಂದು ಸರ್ಕಾರದಿಂದ ಆದೇಶ ಮಾಡಿದ್ದರೂ ಹಲವಾರು ಕಡೆ ಪದೇ ಪದೇ ಸಾರ್ವತ್ರಿಕ ರಜಾದಿನಗಳಲ್ಲಿ ಕೆಲಸದ ಒತ್ತಡ ಹೇರಲಾಗುತ್ತಿದೆ. ಇದರಿಂದ ಕುಟುಂಬದ ಸದಸ್ಯರ ಜೊತೆ ಸಮಯ ವ್ಯಯಿಸಲಾಗುತ್ತಿಲ್ಲ ಹಾಗೂ ಕೌಟುಂಬಿಕ ಕಲಹಗಳು ಉಂಟಾಗುತ್ತಿವೆ. ನಾವು ಮಾನಸಿಕವಾಗಿ ಹತಾಶರಾಗಿದ್ದೇವೆ. ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಜಾದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕು. ಗ್ರಾಮ ಲೆಕ್ಕಾಧಿಖಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯ ಸರಿಪಡಿಸಿ, ಇಲಾಖೆಯ ದ್ವೀತಿಯ ದರ್ಜೆ ಸಹಾಯ ಮತ್ತು ಗ್ರಾಮಲೆಕ್ಕಿಗರ ಜೇಷ್ಠತೆಗಳನ್ನು ಒಟ್ಟುಗೂಡಿಸಿ ಪದನವೀಕರಿಸಬೇಕು. ಜೇಷ್ಠತೆ ಆಧಾರದಲ್ಲಿ ವೇತನ ಹೆಚ್ಚಳ, ಪರಿಷ್ಕøತ ಜಾಬ್ ಚಾರ್ಟ್ ನೀಡಬೇಕು. ಮರಳು ದಂಧೆಕೋರರಿಂದ ಹತ್ಯೆಯಾದ ಗ್ರಾಮಲೆಕ್ಕಾಧಿಕಾರಿ ಸಾಹೇಬ ಪಾಟೇಲ್ ಅವರಿಗೆ ವಿಶೇಷ ಪರಿಹಾರ 20 ಲಕ್ಷ ರೂ. ನೀಡಬೇಕು ಗ್ರಾಮ ಸಹಾಯಕರ ಹುದ್ದೆ ಖಾಯಂಗೊಳಿಸಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಸಹ ಕುಟುಂಬ ಸಮೇತರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಸಣ್ಣ, ಶ್ರೀನಿವಾಸ್, ಜಬೀವುಲ್ಲಾ, ಶಶಿಧರ್, ದುರ್ಗೇಶ್, ನಾಗರಾಜ್, ಭಾರತಿ, ಶ್ವೇತಾ, ಸುಧಾ ಸೇರಿದಂತೆ ಕಂದಾಯ ಇಲಾಖೆ ನೌಕರರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಇದ್ದರು.
ಬಾಕ್ಸ್
ನಮಗೆ ಇದೂವರೆಗೂ ವೇತನ ಪರಿಷ್ಕರಣೆಯಾಗಿಲ್ಲ,ಬಡ್ತಿ ನೀಡಿಲ್ಲ, ಜಾಬ್ ಚಾರ್ಟ್ ನೀಡಿಲ್ಲ.ಎಲ್ಲಾ ಇಲಾಕೆಯ ಕೆಲಸಗಳನ್ನು ಮಾಡುವ ಅನಿವಾರ್ಯತೆಯಿದೆ.ಕಳೆದ 20 ರಿಂದ 30 ವರ್ಷ ಕೆಲಸಮಾಡಿ ಬಡ್ತಿ ಪಡೆಯದೇ ನೌಕರರು ನಿವೃತ್ತರಾಗಿದ್ದಾರೆ.ಆದ್ದರಿಂದ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು.ಇಲ್ಲವಾದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕುಟುಂಬ ಸಮೇತರಾಗಿ ಧರಣಿ ನಡೆಸುತ್ತೇವೆ.ಎಸ್.ಎಂ ಬಸಣ್ಣ ಜಿಲ್ಲಾಧ್ಯಕ್ಷರು.

Leave a Comment