ಮುಂದೆ ಕಾದಿದೆ ಮತ್ತಷ್ಟು ಪ್ರವಾಹ ಭೀತಿ

ಹೊಸದೆಹಲಿ, ಆ. ೨೦- ಮುಂದಿನ 10 ವರ್ಷಗಳಲ್ಲಿ 16 ಸಾವಿರ ಜನ ಪ್ರವಾಹದಿಂದ ಪ್ರಾಣ ಕಳೆದುಕೊಳ್ಳಲಿದ್ದು, 47 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜು ಮಾಡಿದೆ.
ಪ್ರಸ್ತುತ ದೇಶದ ವಿವಿಧೆಡೆ ಆಗುತ್ತಿರುವ ಪ್ರವಾಹದಿಂದ ವಾರ್ಷಿಕ ಜೀವಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟದ ಅಂಕಿ ಅಂಶಗಳ ಆಧಾರದ ಮೇಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಮಾಹಿತಿ ನೀಡಿದೆ.
ಭಾರತದಲ್ಲಿ ಮುಂಚಿತವಾಗಿಯೇ ಹವಾಮಾನ ಮುನ್ನಚ್ಚರಿಕೆ ನೀಡುವ ಮೂಲಕ ಸಂಭಾವ್ಯ ಹಾನಿಯನ್ನು ತಡೆಯಲು ಪೂರಕ ವ್ಯವಸ್ಥೆ ಮತ್ತು ಈ ನಿಟ್ಟಿನಲ್ಲಿ ನೆರವಾಗಲು ಅತ್ಯಾಧುನಿಕ ಉಪಗ್ರಹ ವ್ಯವಸ್ಥೆ ಇದ್ದರೂ ವಿಪತ್ತು ಹಾಗೂ ಅಪಾಯ ಕಡಿಮೆಗೊಳಿಸುವ ಮತ್ತು ವಿಪತ್ತು ತಡೆಯುವ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಬರೀ ದಾಖಲೆಗಳಲ್ಲಿ ಉಳಿದಿವೆ ಎನ್ನಲಾಗಿದೆ.
ನೋಡಲ್ ಏಜೆನ್ಸಿ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೇವಲ ಮಾರ್ಗಸೂಚಿಗಳನ್ನು ನೀಡುವುದು, ವಿಚಾರ ಸಂಕಿರಣ ಆಯೋಜಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಸಭೆ ನಡೆಸುವುದಕ್ಕಷ್ಟೇ ಸೀಮಿತವಾಗಿದೆ. ಕೇರಳದಲ್ಲಿ ಪ್ರಾಧಿಕಾರ ಕೈಗೊಂಡಿರುವ ಯೋಜನೆಗಳ ವಿವರ ನೀಡಲೂ ಸಹ ಸಂಸ್ಥೆಯ ಪ್ರತಿನಿಧಿಗಳು ನಿರಾಕರಿಸಿದ್ದಾರೆ.
ಗೃಹ ಸಚಿವಾಲಯ ಇತ್ತೀಚೆಗೆ 640 ಜಿಲ್ಲೆಗಳಲ್ಲಿ ಅಪಾಯ ಉಂಟಾಗಬಹುದಾದ ಸಾಧ್ಯತೆಯನ್ನು ಅಂದಾಜು ಮಾಡಿದೆ. ಅಪಾಯ ಅಂದಾಜು ಮಾಡುವಿಕೆ, ಅಪಾಯ ತಡೆ ಸಾಧ್ಯತೆ, ಸರಿಪಡಿಸುವ ಕ್ರಮ, ವಿಕೋಪ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ಷಮತೆಯ ಆಧಾರದಲ್ಲಿ ರಾಷ್ಟ್ರೀಯ ಸೂಚ್ಯಂಕ ಸಿದ್ಧಪಡಿಸಲಾಗಿದ್ದು, ವಿಕೋಪ ಸಂದರ್ಭಗಳಲ್ಲಿ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ ಇರುವ ಕಾರಣ ಈ ನಿಟ್ಟಿನಲ್ಲಿ ಗಂಭೀರ ಸುಧಾರಣೆಯಾಗಬೇಕೆಂದು ಸಲಹೆ ಮಾಡಿದೆ.
ಬಹುತೇಕ ರಾಜ್ಯಗಳು ಆಯಾ ರಾಜ್ಯಕ್ಕೆ ನಿರ್ದಿಷ್ಟವಾದ ಅಪಾಯ, ಮೌಲ್ಯ ಮಾಪನ, ಬದಲಾಗುತ್ತಿರುವ ವಾತಾವರಣಕ್ಕೆ ಸಂಬಂಧಿಸಿದಂತೆ, ವಿಕೋಪಗಳ ಸಂಕೀರ್ಣತೆ ಕುರಿತಂತೆ ವಿವರವಾದ ಅಧ್ಯಯನ ನಡೆಸಿಲ್ಲ ಎಂದು ಎನ್.ಡಿ.ಎಂ.ಎ. ತಿಳಿಸಿದೆ.

Leave a Comment