ಮುಂದುವರಿದ ರೈತರ ಸರಣಿ ಆತ್ಮಹತ್ಯೆ

ಕಳೆದ 5 ದಿನಗಳಲ್ಲಿ ಮೂವರ ಸಾವು !
ಮಂಡ್ಯ, ಸೆ. 11- ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದ್ದು, ಕಳೆದ 5 ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಲಬಾಧೆಗೆ ಹೆದರಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಡರಾತ್ರಿ ಜಿಲ್ಲೆಯ ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಗ್ರಾಮದ ರೈತ ರಾಜೇಶ್(45) ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಗೆ 5 ಎಕರೆ ಜಮೀನಿದ್ದು, ಬ್ಯಾಂಕ್ ಮತ್ತು ಕೈಸಾಲ ಸೇರಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆಯಿಂದ ಗದ್ದೆ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದ ರಾಜೇಶ್ ರಾತ್ರಿ ಜಮೀನಿನ ಬಳಿ ನೇಣಿಗೆ ಶರಣಾಗಿದ್ದಾರೆ. ಅಂಬರೀಶ್ ಅವರ ಅಭಿಮಾನಿಯಾಗಿದ್ದ ರೈತ ರಾಜೇಶ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಡೆತ್‍ನೋಟ್‍ನಲ್ಲಿ ನನ್ನ ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ.ಶಿವಕುಮಾರ್, ಮಾಜಿ ಸಚಿವ ಅಂಬರೀಷ್, ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಬರಬೇಕು. ನನ್ನ ಅಂತ್ಯಕ್ರಿಯೆಯನ್ನು ನಗರಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನೆಲ್ಲಿಕೃಷ್ಣಣ್ಣ ಮುಂದೆ ನಿಂತು ಮಾಡಿಸಬೇಕು ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಆದರೆ ನಾವು ಪೊಲೀಸರಿಗೆ ಮಾಹಿತಿ ನೀಡಿ ಬರುವಷ್ಟರಲ್ಲಿ ಡೆತ್ ನೋಟ್ ನಾಪತ್ತೆಯಾಗಿದೆ. ಯಾರನ್ನು ಕೇಳಿದರೂ ಡೆತ್ ನೋಟ್ ಕೊಡುತ್ತಿಲ್ಲ ಎಂದು ರಾಜೇಶ್ ಸ್ನೇಹಿತ ಶಿವಲಿಂಗ ಹೇಳಿದ್ದಾರೆ.
ಕಳೆದ 5 ದಿನಗಳಲ್ಲಿ ಮಂಡ್ಯದಲ್ಲಿ ರೈತ ಆತ್ಮಹತ್ಯೆಗೆ ಶರಣಾದ ಮೂರನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 7 ರಂದು ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ರೈತ ಮಹದೇವು ಸಾಲಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿ ಸೆಪ್ಟೆಂಬರ್ 10 ರಂದು ಹೊನ್ನೇನಹಳ್ಳಿ ಗ್ರಾಮದ ಜವರೇಗೌಡ ಸಾಲಬಾಧೆಗೆ ಹೆದರಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

Leave a Comment