ಮುಂದಿನ ವಾರ ಸಂಪುಟ ವಿಸ್ತರಣೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ನ. ೮- ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾಲ ಸನ್ನಿಹಿತವಾಗಿದ್ದು, ನ. 12ರ ನಂತರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಉಪಚುನಾವಣಾ ಸಮರ ಮುಗಿದು ದೋಸ್ತಿ ಪಕ್ಷಗಳು ವಿಜಯ ಸಾಧಿಸಿದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ನಾಯಕರುಗಳು ಮನಸ್ಸು ಮಾಡಿದ್ದು, ಬಹುತೇಕ ಮುಂದಿನ ವಾರ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬರಲಿದೆ.

ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ನಾಯಕರು ಬಹು ದಿನಗಳಿಂದ ಒತ್ತಡ ಹೇರುತ್ತಲೇ ಬಂದಿದ್ದರು. ಸಂಪುಟ ವಿಸ್ತರಣೆಯಾದರೆ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗಬಹುದು, ಅತೃಪ್ತ ಶಾಸಕರುಗಳು ಬಿಜೆಪಿ ಜತೆ ಸೇರಿ ಸರ್ಕಾರ ಉರುಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯನ್ನು ಒಂದಲ್ಲ ಒಂದು ನೆಪ ಹೇಳಿ ಮುಂದೂಡುತ್ತಲೇ ಬರಲಾಗಿತ್ತು.

ಈಗ ಉಪಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ವಿಜಯ ಸಾಧಿಸಿ ಬಿಜೆಪಿಗೆ ಮುಖಭಂಗವಾಗಿರುವುದರಿಂದ ಸಂಪುಟ ವಿಸ್ತರಣೆಯಾದರೆ ಸರ್ಕಾರಕ್ಕೆ ಯಾವುದೇ ಗಂಡಾಂತರ ಒದಗುವ ಸಾಧ್ಯತೆ ಕಡಿಮೆ ಎಂಬುದನ್ನು ಅರಿತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದಾರೆ. ಹಾಗಾಗಿ ಈ ಬಾರಿ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.

ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿರುವುದರಿಂದ ಸಂಪುಟ ವಿಸ್ತರಣೆಯಾದ ನಂತರ ಸಚಿವ ಸ್ಥಾನ ಸಿಗದ ಶಾಸಕರು ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಸಂಪುಟ ವಿಸ್ತರಣೆಗೆ ಇದು ಸರಿಯಾದ ಸಮಯವಾಗಿದೆ. ತಡ ಮಾಡದೆ ಸಂಪುಟ ವಿಸ್ತರಿಸಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.

ದೆಹಲಿಗೆ ರಾಜ್ಯ ಕಾಂಗ್ರೆಸ್ ನಾಯಕರು

ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠ ನಾಯಕರ ಜತೆ ಚರ್ಚೆ ನಡೆಸಲು ಮುಂದಿನ ವಾರ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರುಗಳು ದೆಹಲಿಗೆ ತೆರಳಿ ಕಾಂಗ್ರೆಸ್‌ನ ವರಿಷ್ಠ ನಾಯಕರದೊಂದಿಗೆ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಿ, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವರು ಎನ್ನಲಾಗಿದೆ.

ಸಿಎಂ ದೆಹಲಿಗೆ

ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಸದ್ಯದಲ್ಲೇ ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಜತೆ ಸಂಪುಟ ವಿಸ್ತರಣೆ ಸೇರಿದಂತೆ ಹಲವು ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುವರು ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಾಲಿನ ಆರು ಸಚಿವ ಸ್ಥಾನಗಳು ಖಾಲಿ ಇದ್ದು, ಎಲ್ಲ ಸ್ಥಾನಗಳನ್ನು ತುಂಬಲು ಪಕ್ಷದ ನಾಯಕರುಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಈ ಖಾಲಿ ಇರುವ ಸಚಿವ ಸ್ಥಾನ ತುಂಬಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದು, ಬಹುತೇಕ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ನಿಂದ ಖಾಲಿ ಇರುವ ಆರು ಸ್ಥಾನಗಳಿಗೆ ಹಿರಿಯ ಶಾಸಕರು ಸೇರಿದಂತೆ ಹಲವು ಶಾಸಕರು ಪೈಪೋಟಿ ನಡೆಸಿದ್ದು, ಮಾಜಿ ಸಚಿವ ಹಾಗೂ ಹಿರಿಯ ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ರಾಮಲಿಂಗಾರೆಡ್ಡಿ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಭದ್ರಾವತಿಯ ಶಾಸಕ ಸಂಗಮೇಶ್, ಬಳ್ಳಾರಿಯ ಶಾಸಕರುಗಳಾದ ನಾಗೇಂದ್ರ, ತುಕಾರಾಂ, ಚಿಕ್ಕಬಳ್ಳಾಪುರದ ಸುಧಾಕರ್, ಸತೀಶ್‌ ಜಾರಕಿಹೊಳಿ, ಲಕ್ಷ್ಮಿಹೆಬಾಳ್ಕರ್ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನ ಪಡೆಯಲು ತಮ್ಮದೇ ಆದ ತಮ್ಮ ಗಾಡ್ ಫಾದರ್‌ಗಳ ಮೂಲಕ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್‌ನಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೂ ಪೈಪೋಟಿ ಇದ್ದು, ವಿಧಾನ ಪರಿಷತ್‌ನ ಹಂಗಾಮಿ ಸಭಾಪತಿ ಬಸವರಾಜಹೊರಟ್ಟಿ, ಹಿರಿಯ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

Leave a Comment