ಮುಂದಿನ ವಾರ ಭಾರತಕ್ಕೆ ಸೌದಿ ಅರೆಬಿಯಾ ರಾಜಕುಮಾರ ಭೇಟಿ

ನವದೆಹಲಿ, ಫೆ 12 -ಸೌದಿ ಅರೇಬಿಯಾದ ರಾಜಕುಮಾರ ಹಾಗೂ ಅಲ್ಲಿನ ರಕ್ಷಣಾ ಸಚಿವರೂ ಆಗಿರುವ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಮುಂದಿನ ವಾರ  ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ.

ಫೆಬ್ರವರಿ 19 ಹಾಗೂ 20ರಂದು ಎರಡು ದಿನಗಳ ಕಾಲ  ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ  ಉದ್ಯಮಿಗಳನ್ನು ಒಳಗೊಂಡ ಉನ್ನತ ನಿಯೋಗದೊಂದಿಗೆ  ಸೌದಿ ರಾಜಕುಮಾರ ಭಾರತಕ್ಕೆ ಆಗಮಿಸಲಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರ ಆಹ್ವಾನದ ಮೇರೆಗೆ ಸೌದಿ ಅರೇಬಿಯಾದ ಗಣ್ಯರು  ಭಾರತಕ್ಕೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ ಭೇಟಿಯ ವೇಳೆ ಸೌದಿ ರಾಜಕುಮಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟಪತಿ ಎಂ.ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ  ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, 2016ರ ಎಪ್ರಿಲ್ ನಲ್ಲಿ  ಸೌದಿ  ಅರೇಬಿಯಾದ  ಯಶಸ್ವಿ ಭೇಟಿಯ ನಂತರ   ಭಾರತಕ್ಕೆ ಸೌದಿ ರಾಜಕುಮಾರ ಆಗಮಿಸುತಿದ್ದು, ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳ ಕುರಿತು ವಿಸ್ತೃತ ಮಾತುಕತೆ ನಡೆಯುವ ನಿರೀಕ್ಷೆಯಿದೆ.

Leave a Comment