ಮುಂದಿನ ವರ್ಷ ರಮ್ಯಾ ಮದುವೆಯಂತೆ?

ಬೆಂಗಳೂರು, ಆ ೧೪- ವಿವಾದಗಳ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ, ಕನ್ನಡ ನಾಡಿನಿಂದಲೇ ದೂರ ಉಳಿದಿರುವ ಚಂದನವನದ ಮೋಹಕ ತಾರೆ ನಟಿ ರಮ್ಯಾ ಮುಂದಿನ ವರ್ಷ ದುಬೈನಲ್ಲಿ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ಭರ್ಜರಿ ಪ್ರಚಾರ ನಡೆಸಿದ ಬಳಿಕ ನಾಪತ್ತೆಯಾದ ರಮ್ಯಾ ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪುನೀತ್ ರಾಜ್‌ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದ ೩೭ ವರ್ಷದ ರಮ್ಯಾ ೧೦ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಆ ಬಳಿಕ ಟಾಲಿವುಡ್, ಕಾಲಿವುಡ್ ನಲ್ಲೂ ಅವಕಾಶ ಗಿಟ್ಟಿಸಿಕೊಂಡ ರಮ್ಯಾ ದೀಢರನೆ ಬಣ್ಣದ ಬದುಕಿಗೆ ವಿದಾಯ ಹೇಳಿದರು, ವಿವಾದಗಳ ಮಧ್ಯೆ ರಾಜಕೀಯ ಪ್ರವೇಶ ಮಾಡಿ ಸಂಸದೆಯಾಗಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ತೊಡಗಿಸಿಕೊಂಡ ಗಮನ ಸೆಳೆದರು. ಅಲ್ಲದೇ ಅಂಬಿ ನಿಧನಕ್ಕೆ ಅನಾರೋಗ್ಯ ನೆಪ ಹೇಳಿ ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡರು.

೨೦೧೬ರಲ್ಲಿ ತೆರೆಕಂಡ ’ನಾಗರಹಾವು’ ಚಿತ್ರ ರಮ್ಯಾ ನಟಿಸಿದ ಕೊನೆಯ ಚಿತ್ರವಾಗಿತ್ತು. ಇದೀಗ ಏಳೆಂಟು ವರ್ಷಗಳಿಂದ ಸಂಬಂಧದಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್- ರಮ್ಯಾ ಸದ್ಯದಲ್ಲೇ ಹಸೆಮಣೆಯೇರಲಿದ್ದಾರಂತೆ.
ಕಳೆದ ವರ್ಷವೇ ಈ ಬಗ್ಗೆ ಸುಳಿವು ನೀಡಿದ್ದ ರಮ್ಯಾ ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ರಹಸ್ಯವಾಗಿ ನಡೆದಿದ್ದು, ದುಬೈನಲ್ಲಿ ರಾಫೆಲ್ ಅವರನ್ನು ರಮ್ಯಾ ವರಿಸಲು ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ನಂತರ ನಾಪತ್ತೆಯಾಗಿದ್ದ ರಮ್ಯಾ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

Leave a Comment