ಮುಂದಿನ ಕೆಲಸದ ಬಗ್ಗೆ ಆಲೋಚನೆ ಮುಖ್ಯ

ಚಿಕ್ಕನಾಯಕನಹಳ್ಳಿ, ಆ. ೧- ಜನ್ಮದಿನ ಆಚರಿಸುವುದು ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳಲು. ಮುಂದೆ ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡಿ ಸಿದ್ಧರಾಗಬೇಕು ಎಂದು ಕುಪ್ಪೂರು ಮಠದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕುಪ್ಪೂರು ಮಠದಲ್ಲಿ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ 44ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಪ್ಪೂರು ಮಠಕ್ಕೆ ಮೊದಲಿನಿಂದಲೂ ಭಕ್ತರು ಬರುತ್ತಲೇ ಇದ್ದಾರೆ. ಇತ್ತೀಚೆಗೆ ಮಠದ ಭಕ್ತರು ಹೆಚ್ಚಾಗಿದ್ದಾರೆ. ಹಿರಿಯ ಶ್ರೀಗಳು ಮಠವನ್ನು ಬೆಳೆಸಿದರು. ಅವರ ಭಕ್ತರು ರಾಜ್ಯಾದ್ಯಂತ ಇದ್ದಾರೆ. ಅವರನ್ನು ನಾವು ಒಗ್ಗೂಡಿಸಿ ಮಠವನ್ನು ಕಟ್ಟುತ್ತಿದ್ದೇವೆ. ಇಂದು ಮಠ ಭಕ್ತರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲಯೂರಿದೆ ಎಂದ ಅವರು, ಮಠ ಹಾಗೂ ಮಠದ ಭಕ್ತರು ನಮ್ಮ ಸಂಪರ್ಕದಲ್ಲಿ ಇರಬೇಕು. ಮಠದ ಬೆಳವಣಿಗೆ ಹಾಗೂ ಭಕ್ತರ ಕಾರ್ಯಗಳ ಪ್ರತಿಯೊಂದು ಕೆಲಸದಲ್ಲೂ ನಾವೂ ಕೈಜೋಡಿಸುತ್ತೇವೆ ಎಂದ ಅವರು, ಭಕ್ತರ ಸಹಕಾರದಿಂದಲೇ ಮಠವು ಬೆಳವಣಿಗೆಯಾಗುತ್ತಿದೆ. ಮಠವು ದಾಸೋಹದ ಮಠವಾಗಿರುವುದರಿಂದ ಇಲ್ಲಿ ಎಂದಿಗೂ ದಾಸೋಹಕ್ಕೆ ಕೊರತೆ ಬಾರದಂತೆ ನೋಡಿಕೊಳ್ಳಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ದಾಸೋಹದ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಸಾಹಿತಿ ವಾಣಿ ಮಾತನಾಡಿ, ಕುಪ್ಪೂರು ಮಠಕ್ಕೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಭಕ್ತರಿದ್ದಾರೆ. ಸ್ವಾಮೀಜಿಯವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುತ್ತಾರೆ ಎಂಬುದು ನಾವು ಅಕ್ಕ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ತಿಳಿಯಿತು ಎಂದ ಅವರು, ಚಿಕ್ಕ ವಯಸ್ಸಿನಲ್ಲೇ ಮಠದ ಅಧಿಕಾರ ಸ್ವೀಕರಿಸಿದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಕಾರ್ಯ ಯಶಸ್ವಿಯಾಗಲಿ ಎಂದರು.

ನಿವೃತ್ತ ಪ್ರಾಂಶುಪಾಲ ವೀರಭದ್ರಪ್ಪ ಮಾತನಾಡಿ, ಕುಪ್ಪೂರು ಮಠ ಅಭಿವೃದ್ಧಿಯಾಗುತ್ತಿದೆ. 10 ವರ್ಷಗಳ ಹಿಂದೆ ಇದ್ದ ಮಠಕ್ಕೂ ಈಗಿರುವ ಮಠಕ್ಕೂ ಸಾಕಷ್ಟು ಅಭಿವೃದ್ಧಿಯಾಗಿದೆ. ಇದರ ಹಿಂದೆ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸೇವೆಯೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಉಮಾಶಂಕರ್, ಮಠದ ಭಕ್ತರಾದ ಮಂಜುನಾಥ್, ಹಂದನಕೆರೆ ಸಬ್‌ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment