ಮುಂಗಾರು ಹಬ್ಬ : ಆಂಧ್ರದ ಎತ್ತುಗಳ ಬಲಪ್ರದರ್ಶನ – ಕರ್ನೂಲ್ ಜಿಲ್ಲೆಗೆ ಪ್ರಥಮ, ದ್ವಿತೀಯ

* ಸ್ಪರ್ಧೆ ವೀಕ್ಷಣೆಗೆ ಭಾರೀ ಜನ ಸಾಗರ
ರಾಯಚೂರು.ಜೂ.17- ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ಎಲ್ಲಾ ಬಹುಮಾನ ಆಂಧ್ರದ ಕರ್ನೂಲ್ ಜಿಲ್ಲೆಯ ಎತ್ತುಗಳು ಬಾಚಿಕೊಂಡಿವೆ.
ಅಖಿಲ ಭಾರತ ಮುಕ್ತ ಎತ್ತುಗಳು ಭಾರದ ಕಲ್ಲು ಎಳೆಯುವ ಇಂದಿನ ಸ್ಪರ್ಧೆಯಲ್ಲಿ ಒಟ್ಟು 7 ಜೋಡೆತ್ತುಗಳು ಪಾಲ್ಗೊಂಡಿದ್ದವು. ಕಿಕ್ಕಿರಿದು ನೆರೆದ ಜನರ ಮಧ್ಯೆ ಆಂಧ್ರದ ಜೋಡೆತ್ತುಗಳು ಎರಡು ಟನ್ ಭಾರದ ಕಲ್ಲು ಎಳೆಯುವ ಗತ್ತು, ಗೈರತ್ತು ವೀಕ್ಷರನ್ನೇ ಪುಲಕೀತಗೊಳಿಸುವಂತಿತ್ತು.
ಕರ್ನೂಲ್ ಜಿಲ್ಲೆಯ ಪೆದ್ದಪಲ್ಲಿ ಚಂದ್ರಕಲಾ ಗ್ರಾಮದ ಶ್ರಾವಣ್ ಕುಮಾರ ಎಂಬುವವರಿಗೆ ಸೇರಿದ ಭಾರೀ ಗಾತ್ರದ ಎತ್ತುಗಳು ನಿಗದಿತ ಸಮಯದಲ್ಲಿ 3,146 ಮೀ. ಎಳೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡವು. ಸ್ಪರ್ಧೆಯಲ್ಲಿ ಶ್ರೇಣಿಕೃತ ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿ ಮೈದಾನಕ್ಕಿಳಿದ ಈ ಜೋಡಿ ಸರಾಗಾವಾಗಿ 3,146 ಅಡಿ ಕಲ್ಲು ಎಳೆಯುವ ಮೂಲಕ ತಮ್ಮ ಬಲ ಪ್ರದರ್ಶಿಸಿ, 60 ಸಾವಿರ ರೂ. ಮೊತ್ತದ ಪ್ರಥಮ ಬಹುಮಾನ ಪಡೆದುಕೊಂಡವು.
ಈ ಪಂದ್ಯದಲ್ಲಿ ದ್ವಿತೀಯ ಬಹುಮಾನವೂ ಕರ್ನೂಲ್ ಜಿಲ್ಲೆಯ ಪುಣ್ಯಂ ಮಂಡಲದ ಕೊತ್ತೂರು ಗ್ರಾಮದ ವೀರಂ ಸುಬ್ರಮಣ್ಯೇಶ್ವರ ರೆಡ್ಡಿ ಇವರಿಗೆ ಸೇರಿದ ಎತ್ತುಗಳು ನಿಗದಿತ ಅವಧಿಯಲ್ಲಿ 3,105 ಅಡಿ ಕಲ್ಲು ಎಳೆಯುವ ಮೂಲಕ ಎರಡನೇ ಸ್ಥಾನದ 45 ಸಾವಿರ ಬಹುಮಾನ ಪಡೆದುಕೊಂಡಿವೆ. ಕಡಪ ಜಿಲ್ಲೆಯ ಪೆದ್ದಟೂರು ಮಂಡಲದ ಕಾಮನೂರು ಗ್ರಾಮದ ಪೆದ್ದಿ ಶಿವಾಕಾಂತ ರೆಡ್ಡಿ ಇವರಿಗೆ ಸೇರಿದ ಎತ್ತುಗಳು 3,093 ಅಡಿ ದೂರಕ್ಕೆ ಕಲ್ಲು ಎಳೆದು ಮೂರನೇ ಸ್ಥಾನದ 35 ಸಾವಿರ ರೂ. ತಮ್ಮದಾಗಿಸಿಕೊಂಡವು.
ಕರ್ನೂಲ್ ಜಿಲ್ಲೆಯ ಪುಣ್ಯ ಮಂಡಲದ ಕೊತ್ತೂರು ಗ್ರಾಮದ ಬಿ.ಎಸ್.ಎಸ್. ರೆಡ್ಡಿ ಅವರಿಗೆ ಸೇರಿದ ಎತ್ತುಗಳು 3,054 ಅಡಿ ಕಲ್ಲು ಎಳೆದು ನಾಲ್ಕನೆಯ ಸ್ಥಾನದ 25 ಸಾವಿರ ರೂ. ಬಹುಮಾನ ತಮ್ಮದಾಗಿಸಿಕೊಂಡವು. ವೈ.ಎಸ್. ಆರ್. ಜಿಲ್ಲೆಯ ರಾಜಿಪೇಟ ಮಂಡಲದ ಸುಂಕೇಶಲ ಗ್ರಾಮದ ಮಲೆ ಸುಶೇಂದ್ರ ರೆಡ್ಡಿ ಅವರ ಎತ್ತುಗಳು 2,502 ಅಡಿ ದೂರ ಕಲ್ಲು ಎಳೆಯುವ ಮೂಲಕ ಐದನೆಯ ಸ್ಥಾನ 20 ಸಾವಿರ ರೂ. ಬಹುಮಾನ ತಮ್ಮದಾಗಿಸಿಕೊಂಡರೇ, ಗದ್ವಾಲ್ ಜಿಲ್ಲೆಯ ಐಜಾ ಮಂಡಲ ತುಪತ್ರಾಲ ಗ್ರಾಮದ ಚಂದ್ರಶೇಖರ ಅವರಿಗೆ ಸೇರಿದ ಎತ್ತುಗಳು 2,493 ಭಾರದ ಕಲ್ಲೆಳೆದು ಆರನೆಯ ಸ್ಥಾನದ 10 ಸಾವಿರ ಬಹುಮಾನ ತಮ್ಮದಾಗಿಸಿಕೊಂಡವು.
ಎರಡನೇ ದಿನದ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. ಕಾರ ಹುಣ್ಣಿಮೆ ಅಂಗವಾಗಿ ಇಂದು ಕಲ್ಲೆಳೆಯುವ ಸ್ಪರ್ಧೆ ವೀಕ್ಷಣೆಗೆ ಜನ ಸಾಗರ ನೆರೆದಿತ್ತು. ಮೈದಾನ ಸುತ್ತ ಜನ ಕಿಕ್ಕಿರಿದು ಸೇರಿದ್ದರು. ಎತ್ತುಗಳ ಕಲ್ಲೆಳೆಯುವ ಸಂದರ್ಭದಲ್ಲಿ ಅವುಗಳನ್ನು ಪ್ರೋತ್ಸಾಹಿಸಲು ಮುಗಿಲು ಮುಟ್ಟುವ ಕೇಕೇ ಕೂಗು ಹಾಕಿದರು. ನಂತರ ವಿಜೇತರಿಗೆ ಬಹುಮಾನ ನೀಡಲಾಯಿತು.
ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಅವರು ವಿಜೇತರಿಗೆ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ದೊಡ್ಡ ಮಲ್ಲೇಶಪ್ಪ, ರಾಳ್ಳ ತಿಮ್ಮಾರೆಡ್ಡಿ, ಶೇಖರ ರೆಡ್ಡಿ, ಬಂಗಿ ನರಸರೆಡ್ಡಿ, ಪೋಗಲ ಶೇಖರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಪುಂಡ್ಲಾ ನರಸರೆಡ್ಡಿ, ಡ್ಯಾಡಿ ಗೋಪಾಲ, ಎನ್.ಶ್ರೀನಿವಾಸ ರೆಡ್ಡಿ, ಟಿ.ಶ್ರೀನಿವಾಸ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment