ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಿಮಿತ್ಯ

ಸಾಮೂಹಿಕ ವಿವಾಹ : 17 ಜೋಡಿ ದಾಂಪತ್ಯ ಜೀವನಕ್ಕೆ
ರಾಯಚೂರು.ಜೂ.13- ಮುಂಗಾರು ಸಾಂಸ್ಕೃತಿಕ ಹಬ್ಬದ ಚಟುವಟಿಕೆಗಳು ಇಂದು ಸಾಮೂಹಿಕ ವಿವಾಹ ಮೂಲಕ ಆರಂಭಗೊಂಡಿವೆ.
ಇಂದು ನಗರದ ಗದ್ವಾಲ್ ರಸ್ತೆಯಲ್ಲಿರುವ ಮಾತಾ ಲಕ್ಷ್ಮಮ್ಮ ದೇವಿ ಹಾಗೂ ಕಾಳಿಕಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 17 ಜೋಡಿಗಳು ವಿವಾಹ ಬಂಧನಕ್ಕೊಳಪಟ್ಟರು. ಈ ಕಾರ್ಯಕ್ರಮ ಸಾನಿಧ್ಯ ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು, ಗಬ್ಬೂರಿನ ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠದ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯರು ವಹಿಸಿದ್ದರು.
ಮುನ್ನೂರುಕಾಪು ಸಮಾಜವೂ ಪ್ರಪ್ರಥಮ ಬಾರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿತ್ತು. ಮುಂಗಾರು ಸಾಂಸ್ಕೃತಿಕ ಹಬ್ಬದ ಭಾಗವಾಗಿ ಆಯೋಜಿಸಿದ ಸಾಮೂಹಿಕ ವಿವಾಹದಲ್ಲಿ ಒಟ್ಟು 17 ಜೋಡಿ ಪಾಲ್ಗೊಂಡಿದ್ದವು. ಪವನ್ ಆಚಾರ್ ಅವರು ಜೋಡಿಗಳ ವಿವಾಹ ಬಂಧನದ ಸಾಂಪ್ರದಾಯಿಕ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುನ್ನೂರುಕಾಪು ಸಮಾಜದ ಹಿರಿಯ ಮುಖಂಡರು, ಮಾಜಿ ಶಾಸಕರು ಹಾಗೂ ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಮತ್ತು ಮುನ್ನೂರುಕಾಪು ಸಮಾಜದ ಜಿಲ್ಲಾಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ ಅವರು ನೂತನ ವಧು-ವರರಿಗೆ ಆಶೀರ್ವದಿಸಿದರು.
ಮುನ್ನೂರುಕಾಪು ಸಮಾಜ ಪ್ರತಿ ವರ್ಷದಂತೆ ಈ ವರ್ಷವೂ ಜೂ. 16, 17 ಹಾಗೂ 18 ರಂದು ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಸಲಿದೆ. ಇದೇ ಪ್ರಪ್ರಥಮ ಬಾರಿಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಮುನ್ನೂರುಕಾಪು ಸಮಾಜದ ಯುವಕರು ವಿಶೇಷ ಆಸಕ್ತಿಯೊಂದಿಗೆ ನಿರ್ವಹಿಸಿದ್ದರು.
ಪ್ರಥಮ ವರ್ಷದ ಈ ಸಾಮೂಹಿಕ ವಿವಾಹಕ್ಕೆ ಸಮಾಜದಿಂದ ಭಾರೀ ಸ್ಪಂದನೆ ವ್ಯಕ್ತಗೊಂಡಿತ್ತು. ವಿವಾಹ ಸರಳ ಮತ್ತು ಸುಸಜ್ಜಿತವಾಗಿ ನಿರ್ವಹಿಸಬೇಕೆಂಬ ಕಲ್ಪನೆಗನುಗುಣವಾಗಿ ಬಡ ಕುಟುಂಬದವರಿಗೆ ಮುನ್ನೂರುಕಾಪು ಸಮಾಜ ಈ ಕಾರ್ಯಕ್ರಮ ಮೂಲಕ ನೆರವಾಯಿತು.
ವಧು-ವರರಿಗೆ ತಾಳಿ, ಕಾಲುಂಗುರ ಮತ್ತು ಬಟ್ಟೆ ಸಮಾಜದಿಂದ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಅತಿ ಹೆಚ್ಚಿನ ಜನ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಮುಂಗಾರು ಸಾಂಸ್ಕೃತಿಕ ಹಬ್ಬ ಇಲ್ಲಿವರೆಗೂ ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು. ಈಗ ವಿವಿಧ ಕಾರ್ಯಕ್ರಮ ನಿಮಿತ್ಯ ಐದು ದಿನಕ್ಕೆ ವಿಸ್ತರಿಸಿದಂತಾಗಿದೆ. ಇಂದು ಸಾಮೂಹಿಕ ವಿವಾಹ, ನಾಳೆ ಶ್ರೀ ಮಾತಾ ಲಕ್ಷ್ಮಮ್ಮ ದೇವಿ ದೇವಸ್ಥಾನದಲ್ಲಿ ಮಳೆ, ಬೆಳೆಗಾಗಿ ವಿಶೇಷ ಪೂಜಾ ನಡೆಯಲಿದೆ.
ಜೂ.16 ರಿಂದ ಜನಪ್ರಿಯ ಮತ್ತು ಈ ಭಾಗದ ಪ್ರತಿಷ್ಠಿತ ಮುಂಗಾರು ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಆರಂಭಗೊಳ್ಳಲಿವೆ. ಮುಂಗಾರು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಯಶಸ್ವಿ ನಿರ್ವಹಣೆಗೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಮುಂದಿನ ಎರಡು ದಿನಗಳಲ್ಲಿ ಆರಂಭಗೊಳ್ಳುವ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಹಿನ್ನೆಲೆ, ನಗರದಲ್ಲಿ ಕಾರ ಹುಣ್ಣಿಮೆ ವೈಭವ ಕಳೆಕಟ್ಟುವಂತೆ ಮಾಡಿದೆ.
ಇಂದಿನ ಸಾಮೂಹಿಕ ವಿವಾಹದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ರೆಡ್ಡಿ, ಎಂ.ನಾಗೀರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಶೇಖರ ರೆಡ್ಡಿ, ದೊಡ್ಡ ಮಲ್ಲೇಶಪ್ಪ, ಗುಡ್ಸಿ ನರಸರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ, ಜಿ.ತಿಮ್ಮಾರೆಡ್ಡಿ, ಬಂಗಿ ನರಸರೆಡ್ಡಿ, ವೆಂಕಟರೆಡ್ಡಿ, ಪೋಗಲ್ ಶೇಖರ ರೆಡ್ಡಿ ಉಪಸ್ಥಿತರಿದ್ದರು.

Leave a Comment