ಮೀಸಲಾತಿ ನಾನಾ ರೀತಿ ವ್ಯಾಖ್ಯಾನ

ಬೆಂಗಳೂರು, ಮಾ. ೧೮- ಮೀಸಲಾತಿಯನ್ನು ಜಾರಿಗೆ ತಂದ ಉದ್ದೇಶ ದೇಶದಲ್ಲಿ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎನ್ನುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೇಳಿಕೆ ವಿಧಾನ ಪರಿಷತ್ತಿನಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗಂಭೀರ ಚರ್ಚೆಗೆ ವೇದಿಕೆ ಕಲ್ಪಿಸಿತು.
ಭಾರತದ ಸಂವಿಧಾನದ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಹೆಚ್.ಎಂ. ರೇವಣ್ಣ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮೀಸಲಾತಿಗಾಗಿ ಅನೇಕ ಉಪಜಾತಿಗಳು ದೇಶದ ಉದ್ದಗಲಕ್ಕೂ ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟು ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧೀಜಿಯವರು ಕಂಡ ಕನಸು ಇನ್ನೂ ನನಸಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಡಿಎಸ್‌‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಧ್ಯೆ ಪ್ರವೇಶಿಸಿ, ಅಂಬೇಡ್ಕರ್ ಜಾರಿಗೆ ತಂದ ಮೀಸಲಾತಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಮೀಸಲಾತಿ ಉಳ್ಳವರ ಪಾಲಾಗುತ್ತಿದೆ ಎಂದು ದನಿಗೂಡಿಸಿದರು.
ಆಗ ಹೆಚ್.ಎಂ. ರೇವಣ್ಣ ಮಧ್ಯೆ ಪ್ರವೇಶಿಸಿ ನೀವು ಪರೋಕ್ಷವಾಗಿ ಸದಾಶಿವ ಆಯೋಗ ವರದಿ ಜಾರಿಯಾಗಿಲ್ಲ ಎನ್ನುವ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಪ್ರಶ್ನಿಸಿ, ಊರು ಊರ ಮೇಲೆ ಕುರಿ ಕಾಯುವ ಅಲೆಮಾರಿ ಕುರುಬ ಸಮುದಾಯಕ್ಕೂ ಮೀಸಲಾತಿ ಸಿಕ್ಕಿಲ್ಲ ಎಂದರು.
ಆಗ ಮಧ್ಯೆ ಪ್ರವೇಶಿಸಿದ ಗೋವಿಂದ ಕಾರಜೋಳ ಅವರು, ಊರಿಂದ ಊರಿಗೆ ಕುರಿ ಮೇಯಿಸುತ್ತಾ ಸಾಗುವ ಅಲೆಮಾರಿ ಸಮುದಾಯವನ್ನು ಕುರುಬರು ಎಂದು ಇಂದಿಗೂ ನೀವು ಒಪ್ಪಿಕೊಂಡಿಲ್ಲ. ಅವರ ಜತೆ ನಂಟಸ್ಥನ, ಬೀಗಸ್ಥನ ಮಾಡಿದ್ದೀರಾ, ಮೊದಲು ಅವರು ಕುರುಬರು ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.
ಆಗ ಮಧ್ಯೆ ಪ್ರವೇಶಿಸಿದ ಬಿಜೆಪಿ ರಘುನಾಥರಾವ್ ಮಲ್ಕಾಪುರೆ, ಅಲೆಮಾರಿ ಸಮುದಾಯ ಕುರುಬ ಸಮುದಾಯಕ್ಕೆ ಸೇರಿದೆ. ನಮ್ಮಲ್ಲಿ ಉಪಜಾತಿ ಇಲ್ಲ. ಇದ್ದರೂ ಎಲ್ಲರೂ ಪ್ರದೇಶ ಕುರುಬರ ಸಂಘದ ಅಡಿಯಲ್ಲೇ ಬರುತ್ತೇವೆ. ನಮಗಿರುವುದು ಒಂದೇ ಗುರುಪೀಠ ಎಂದರು.
ಆಯನೂರು ಮಂಜುನಾಥ್ ಮಧ್ಯೆ ಪ್ರವೇಶಿಸಿ, ಸಂವಿಧಾನದ ವಿಷಯದಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಸಮಾನತೆ ವಿಷಯ ಪ್ರಸ್ತಾಪವಾಗುವುದು ಸಮಂಜಸ. ಮೀಸಲಾತಿ ಬೇಕೇ ಬೇಕು. ಈ ವಿಷಯದಲ್ಲಿ ಎರಡು ಮಾತಿಲ್ಲ. ಮೀಸಲಾತಿ ಎನ್ನುವುದು ಮೊದಲ ಪಂಕ್ತಿಯಲ್ಲಿ ಕುಳಿತು ಊಟ ಮಾಡುವವರಿಗೆ ಸಿಗುತ್ತಿದೆಯೇ ಹೊರತು, 2-3ನೇ ಪಂಕ್ತಿಗೆ ಊಟ ಮಾಡಲು ಕಾಯುತ್ತಿರುವ ಅನೇಕರಿಗೆ ಸಿಗುತ್ತಿಲ್ಲ. ಇಂತಹ ತಾರತಮ್ಯ ನಿವಾರಣೆಯಾಗಿ ಮೀಸಲಾತಿ ಅರ್ಹರಿಗೆ ಸಿಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹೆಚ್.ಎಂ. ರೇವಣ್ಣ ಹೆಚ್ಚು ಭೂಮಿ ಹೊಂದಿರುವ ದಲಿತರು ಹಾಗೂ ಭೂಮಿ ಇಲ್ಲದ ಸವರ್ಣೀಯರಲ್ಲಿ ಯಾರಿಗೆ ಮಾನ್ಯತೆ ಕೊಡುತ್ತೀರಿ, ಇಂತಹ ತಾರತಮ್ಯ ಮೊದಲು ಬದಲಾಗಬೇಕು ಎಂದು ಹೇಳಿದರು.
ಆಗ ದನಿಗೂಡಿಸಿದ ಉಪಮುಖ್ಯಮಂತ್ರಿ ಕಾರಜೋಳ ಅವರು, ತಾರತಮ್ಯ ಹೋಗಲಾಡಿಸುವ ಅಗತ್ಯವಿದೆ ಎಂದು ಹೇಳಿದರು.
ಈ ವೇಳೆ ವೈ.ಎ. ನಾರಾಯಣಸ್ವಾಮಿ ಮಧ್ಯೆ ಪ್ರವೇಶಿಸಿ, ಹಿಂದುಳಿದ ವರ್ಗಗಳಿಗೆ ನೀವೊಬ್ಬರೇ ಚಾಂಪಿಯನ್ ಅಲ್ಲ, ನಾನು ಹಳ್ಳಿಯಿಂದ ಬಂದವನೇ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಕಷ್ಟಸುಖಗಳ ಅರಿವಿದೆ. ಈ ಸಮುದಾಯಕ್ಕೆ ಆಗುತ್ತಿರುವ ತಾರತಮ್ಯ ನಿವಾರಣೆಯಾಗಬೇಕು ಎಂದರು.
ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಮಾತನಾಡಿ, ಮೀಸಲಾತಿ ಅರ್ಹರಿಗೆ ಸಿಗಬೇಕು. ಆದರೆ ಅದನ್ನು ಒಂದೇ ಕುಟುಂಬ ಅಥವಾ ಕೆಲವೇ ಕೆಲವು ಜನರು ಪಡೆಯುವುದು ಸರಿಯಲ್ಲ. ಎಲ್ಲರಿಗೂ ಸಿಗಬೇಕು ಎಂದರು.
ಸಚಿವ ವಿ. ಸೋಮಣ್ಣ ಮಧ್ಯೆ ಪ್ರವೇಶಿಸಿ, ಮೀಸಲಾತಿಯನ್ನು ಜಾರಿಗೆ ತಂದಿದ್ದರಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮಹಿಳೆಯರೂ ಚುನಾವಣೆಗೆ ನಿಲ್ಲುವಂತಾಯಿತು ಎಂದರು.
ಆಗ ಹೆಚ್.ಎಂ. ರೇವಣ್ಣ, ಈ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದರು.
ಬಿಜೆಪಿಯ ಸುನಿಲ್ ಸುಬ್ರಹ್ಮಣ್ಯ ಪ್ರಸ್ತಾಪಿಸಿದ ವಿಷಯದ ಬಗ್ಗೆ ರೇವಣ್ಣ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಈಗ ಸಂವಿಧಾನದ ಬಗ್ಗೆ ಚರ್ಚೆ ಮಾಡಿ, ಮುಂದೆ ಮನುಧರ್ಮದ ಬಗ್ಗೆ ಚರ್ಚೆ ಮಾಡೋಣ ಎಂದು ರೇವಣ್ಣ ಅವರಿಗೆ ಸಭಾಪತಿಗಳು ಸೂಚಿಸಿದರು.
ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮೀಸಲಾತಿ ವಿಷಯದಲ್ಲಿ ಹಲವು ಉಪಯುಕ್ತ ವಿಷಯಗಳ ಕುರಿತು ವಿಚಾರ ವಿನಿಮಯ, ಚರ್ಚೆ ನಡೆಸಿದರು.

Leave a Comment