ಮೀಸಲಾತಿ ತೀರ್ಪು : ಇದೇ 23 ಕ್ಕೆ ಭಾರತ್ ಬಂದ್ : ಆಜಾದ್

ನವದೆಹಲಿ, ಫೆ 13 – ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ಇತ್ತಿಚಿನ ತೀರ್ಪಿನ ಬಗ್ಗೆ ಅಸಮಾಧಾನಗೊಂಡ ದಲಿತ ಸಂಘಟನೆಗಳು ಇದೆ 23 ರಂದು ಭಾರತ್ ಬಂದ್ ಗೆ ಕರೆ ನೀಡಿವೆ.
ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಭಾರತ್ ಬಂದ್ ಗೆ ಕರೆ ನೀಡಿದ್ದು ದಲಿತ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿದ್ದಾರೆ.
ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು.ಮೇಲ್ಮನವಿ ಸಲ್ಲಿಸಬೇಕು ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸರ್ವಪಕ್ಷಗಳ ಎಲ್ಲಾ ಸಂಸದರು ಮತ್ತು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದೂ ಆಜಾದ್ ಒತ್ತಾಯಿಸಿದ್ದಾರೆ .
‘ಇವರನ್ನು ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು. ಅವರು ಈ ವಿಚಾರ ಪ್ರಸ್ತಾಪ ಮಾಡದೇ ಇದ್ದಲ್ಲಿ ಅವರ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾರತ್ ಬಂದ್ ಗೂ ಮುನ್ನ ಇದೆ 16ರಂದು ಭೀಮ್ ಆರ್ಮಿ ಸಂಘಟನೆ ತನ್ನ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ದೆಹಲಿಯ ಮಂಡಿ ಹೌಸ್ ಪ್ರದೇಶದಿಂದ ಸಂಸತ್ ಭವನದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದೂ ತಿಳಿಸಿದ್ದಾರೆ.

ರಾಜ್ಯ ಸರ್ಕಾರಗಳು ಮೀಸಲಾತಿ ನೀತಿ ರೂಪಿಸಲು ಬರುವುದಿಲ್ಲ. ಮೀಸಲಾತಿಯಿಂದ ಬಡ್ತಿ ಪಡೆಯುವುದು ಸಂವಿಧಾನದ ಮೂಲಭೂತ ಹಕ್ಕಲ್ಲ. ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ತಾನು ನಿರ್ದೇಶನ ನೀಡಲು ಬರುವುದಿಲ್ಲ ಎಂದೂ ಸುಪ್ರೀಂಕೊರ್ಟ್ ತೀರ್ಪು ನೀಡಿತ್ತು.ಇದರ ವಿರುದ್ದ ದೇಶದ ಉದ್ದಗಲಕ್ಕೂ ಹೆಚ್ಚಿನ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Comment