ಮೀಸಲಾತಿಯಲ್ಲಿ ಅವ್ಯವಹಾರ: ಬಿಜೆಪಿ ಕಿಡಿ

ಅರಸೀಕೆರೆ,ಆ. ೧೦- ನಗರಸಭೆ ಹಾಗೂ ಪುರಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಧುರೀಣರು ತರಾತುರಿಯಲ್ಲಿ ತಮ್ಮ ತಮ್ಮ ಪಕ್ಷದ ಏಳ್ಗೆಗೆ ಅವಿರತ ಹೋರಾಟ ಮಾಡುತ್ತಿದ್ದಾರೆ.

ನಗರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನಗರಸಭಾ ಚುನಾವಣೆ ನಡೆಸುತ್ತಿದ್ದು, ಇದರಲ್ಲಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಮಾಡುವ ಸಂದರ್ಭದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕು ಮುಖಂಡ ಜಿ.ವಿ.ಟಿ. ಬಸವರಾಜು, ನಗರಸಭೆಯ ಆಡಳಿತ 10 ವರ್ಷಗಳಿಂದಲೂ ಜೆಡಿಎಸ್ ನವರು ಅವರಿಗೆ ಬೇಕಾದ ರೀತಿ ನಗರಸಭೆಯನ್ನು ಬಳಸಿಕೊಂಡಿದ್ದು ಇದು ಕೇವಲ ಜೆಡಿಎಸ್ ಆಡಳಿತ ಪಕ್ಷದ ನಗರಸಭೆಯಾಗಿದೆ. ಇಲ್ಲಿ ಶಾಸಕರ ಹೇಳಿಕೆ ಹಾಗೂ ಕರ್ತವ್ಯವೇ ಮೇಲಾಗಿದ್ದು, ಅವರು ಹೇಳಿದ್ದೆ ದಾರಿ ಆಗಿದೆ. ಇಲ್ಲಿನ ಶಾಸಕರು ದಬ್ಬಾಳಿಕೆ ಮಾಡಿ ನಗರಸಭೆಯ ಅಧಿಕಾರಿಗಳನ್ನು ಅವರ ಹಿಡಿತಕ್ಕೆ ಬಳಸಿಕೊಂಡು ನಗರದ ಜನತೆಗೆ ಗೊತ್ತಿಲ್ಲದ ರೀತಿ ಅವರಿಗೆ ಬೇಕಾದ ರೀತಿ ಬಳಸಿಕೊಂಡು ಬೇರೆ ಪಕ್ಷದವರಿಗೆ ಮೋಸ ಮಾಡಿದ್ದಾರೆ ಎಂದರು.

ಈ ಬಾರಿಯ ನಗರಸಭೆ ಚುನಾವಣೆಗೆ ಇಲ್ಲಿನ ಶಾಸಕರು ದರ್ಪದಿಂದ ಹಾಗೂ ಮಧ್ಯವರ್ತಿಗಳನ್ನು ಬಳಸಿಕೊಂಡು ಈ ಬಾರಿ ಚುನಾವಣೆಯಲ್ಲಿ ನಗರಸಭೆಗೆ ಚುನಾಯಿತ ಪ್ರತಿನಿಧಿಗಳನ್ನು ನೇಮಿಸಲು ಹೊರಟಿದ್ದಾರೆ. ಆದರೆ ಅವರ ಬೆನ್ನೆಲುಬಾಗಿ ನಿಂತಿರುವ ಬೆಂಬಲಿಗರೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಅಲ್ಲದೆ ನಗರಸಭೆಗೆ 16 ಜನ ಪ್ರತಿನಿಧಿಗಳಿಗೆ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಆದರೆ 14 ಜನರಿಗೆ ಮಾತ್ರ ಕೊಟ್ಟಿರುವುದು ಮಹಿಳೆಯರಿಗೆ ಅನ್ಯಾಯವೆಸಗಿದ್ದಾರೆ. ಕೆಲವೊಂದು ಕಡೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಬೇರೆ ಬೇರೆ ವಾರ್ಡ್‌ಗಳಲ್ಲಿ ಮೀಸಲಾತಿ ನೀಡಿದ್ದು, ಇದರಿಂದ ಸಾಮಾನ್ಯ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರಲ್ಲದೆ ನಾವು ಮೀಸಲಾತಿ ವಿರೋಧಿಗಳಲ್ಲ ಎಂದರು.

ಅಲ್ಲದೆ ಇದುವರೆಗಿನ ಆಡಳಿತದಲ್ಲಿ ಇವರು ನಗರದ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳನ್ನು ಸರಿಯಾಗಿ ಮಾಡದೆ ಅದರಲ್ಲು ಕಳಪೆ ಕಾಮಗಾರಿ ಮಾಡಿಕೊಂಡು ಅಕ್ರಮ ಅವ್ಯವಹಾರ ಮಾಡಿದ್ದು, ಕಿಕ್ ಬ್ಯಾಕ್ ಯೋಜನೆಗಳನ್ನಾಗಿ ದುರುಪಯೋಗಪಡಿಸಿಕೊಂಡಿರುವ ನಗರಸಭೆ ಆಡಳಿತ ನೋಡಿ ಜನರು ನಗರವನ್ನು ಸುಂದರ ಸ್ವಚ್ಚ ನಗರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್.ಡಿ. ಪ್ರಸಾದ್, ಮನೋಜ್‌ಕುಮಾರ್, ಮುರುಳಿ ನಿರ್ಮಲ್ ಮತ್ತಿತರರು ಉಪಸ್ಥಿತರಿದ್ದರು.

Leave a Comment