ಮೀನುಗಾರರ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ

ಉಡುಪಿ, ಜ.೧೦- ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರನ್ನು ಶೀಘ್ರ ಪತ್ತೆಗೆ ವಿಶೇಷ ಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮೀನುಗಾರ ವೇದಿಕೆಯ ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ ಮೀನುಗಾರಿಕೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿ, ಮೀನುಗಾರಿಕೆಗೆ ಚಟು ವಟಿಕೆಗಳಿಗೆ ಜಿಎಎಸ್‌ಟಿ ವಿನಾಯಿತಿ, ಮೀನುಗಾರಿಕೆಗೆ ಕೇಂದ್ರ ಸರಕಾರದ ಪ್ರತ್ಯೇಕ ಸಚಿವಾಲಯ, ೬೦ ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ, ಮೀನುಗಾರಿಕೆಗೆ ಬಳಸುವ ಸೀಮೆ ಎಣ್ಣೆ ಪ್ರಮಾಣದಲ್ಲಿ ಹೆಚ್ಚಳ, ಪ್ರತ್ಯೇಕ ಮೀನುಗಾರಿಕ ಕೈಗಾರಿಕಾ ವಲಯ ಹಾಗೂ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ನಿಯೋಗ ಪ್ರಧಾನಿ ಅವರನ್ನು ವಿನಂತಿಸಿತು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಮೀನುಗಾರರ ಪತ್ತೆಗೆ ಸಕಲ ರೀತಿಯಲ್ಲಿ ಸಹಕಾರ ನೀಡಿ, ಮೀನುಗಾರರು ಸುರಕ್ಷಿತ ವಾಗಿ ಮರಳಿ ಬರಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಅಖಿಲ ಭಾರತ ಮೀನುಗಾರ ವೇದಿಕೆಯ ಅಧ್ಯಕ್ಷ ವೆಲ್ಜಿ ಭಾಯಿ ಮಸಾನಿ, ಗುಜರಾತ್ ಸಂಸದ ರಾಜೇಶ್ ಭಾಯಿ ಚುಡಸಮ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್, ಕಿಶೋರ್ ಸುವರ್ಣ, ಅನಿಲ್, ನಿತಿನ್ ಕುಮಾರ್, ಮನೋಹರ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.

Leave a Comment