ಮೀನಿನ ಲಾರಿಗಳು ಪಲ್ಟಿ

ಮೂವರಿಗೆ ಗಂಭೀರ ಗಾಯ
ಹಳೆಯಂಗಡಿ, ಅ.೧೨- ಪ್ರತ್ಯೇಕ ರಸ್ತೆಯಲ್ಲಿ ಸಾಗುತ್ತಿದ್ದ ಎರಡು ಮೀನಿನ ಲಾರಿಗಳು ರಸ್ತೆ ಬಿಟ್ಟು ಡಿವೈಡರ್ ಮೇಲೇರಿ ಪಲ್ಟಿಹೊಡೆದ ಘಟನೆ ನಿನ್ನೆ ತಡರಾತ್ರಿ ರಾ.ಹೆ.೬೬ರ ಹಳೆಯಂಗಡಿ ಬಳಿಯ ಪಾವಂಜೆ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ೯:೩೦ರ ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಮೀನಿನ ಲಾರಿ ಹಾಗೂ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಗಳು ಸೇತುವೆ ಸಮೀಪ ಬರುತ್ತಿದ್ದಂತೆ ಪರಸ್ಪರ ಡಿಕ್ಕಿ ಹೊಡೆದು ಪಲ್ಟಿಯಾಗಿವೆ. ಘಟನೆಗೆ ಒಂದು ಲಾರಿಯ ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೇರಿದ್ದು ಈ ವೇಳೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಸಾಗಿಬರುತ್ತಿದ್ದ ಲಾರಿ ಚಾಲಕನಿಗೆ ಗಲಿಬಿಲಿ ಉಂಟಾಗಿ ಆತನೂ ಡಿವೈಡರ್ ಮೇಲೇರಿ ಪಲ್ಟಿಯಾಗಿರಬೇಕೆಂದು ಶಂಕಿಸಲಾಗಿದೆ. ಗಾಯಾಳುಗಳನ್ನು ವಾಹನದಿಂದ ಹೊರಕ್ಕೆಳೆದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಸುರತ್ಕಲ್ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment