ಮೀಟರ್ ಅಳವಡಿಕೆಗೆ ಲಂಚ: ಬೆಸ್ಕಾಂ ಕಿರಿಯ ಇಂಜಿನಿಯರ್ ಎಸಿಬಿ ಬಲೆಗೆ

ಕುಣಿಗಲ್, ಫೆ. ೭- ಮನೆಗೆ ಮೀಟರ್ ಅಳವಡಿಸಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ 6 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂನ ಕಿರಿಯ ಇಂಜಿನಿಯರ್  ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗ ಕಚೇರಿಯಲ್ಲಿ ಕಿರಿಯ ಇಂಜಿನಿಯರ್ ಶಂಕರ್ ಎಂಬುವರೇ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ.

ವೈರಿಂಗ್ ಅಸಿಸ್ಟೆಂಟ್ ಚಂದ್ರಶೇಖರ್ ಎಂಬುವರು ದೊಡ್ಡೇಗೌಡನಪಾಳ್ಯದ ರಮೇಶ್ ಮತ್ತು ನಾಗೇಂದ್ರ ಎಂಬುವರ ಮನೆಗಳಿಗೆ ವೈರಿಂಗ್ ಕೆಲಸವನ್ನು ಮಾಡಿಕೊಟ್ಟಿದ್ದು, ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಲು ಸಂತೇಮಾವತ್ತೂರು ಶಾಖೆಗೆ ಹೋಗಿ ಮೀಟರ್ ಅಳವಡಿಸುವಂತೆ  ಅರ್ಜಿ ಸಲ್ಲಿಸಿದ್ದಾರೆ. ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕಿರಿಯ ಇಂಜಿನಿಯರ್‌ ಶಂಕರ್‌ರವರು 1500 ರೂ. ಲಂಚ ಪಡೆದುಕೊಂಡಿದ್ದು. ಒಂದು ವಾರದೊಳಗೆ ಮೀಟರ್ ಅಳವಡಿಸುವುದಾಗಿ ತಿಳಿಸಿದ್ದಾರೆ. ನಂತರ ಮೀಟರ್ ಅಳವಡಿಸದ ಕಾರಣ ಮತ್ತೆ ಜೆ.ಇ. ಅವರನ್ನು ವಿಚಾರಿಸಿದಾಗ ಇನ್ನೂ 6 ಸಾವಿರ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಬೇಸತ್ತ ಇವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು.

ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ರಘುಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಹಾಲಪ್ಪ, ನರಸಿಂಹರಾಜು, ಗಿರೀಶ್, ಶಿವಣ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment