ಮಿ.ಇಂಡಿಯಾದತ್ತ ಧೀಮಂತ್ ದಾಪುಗಾಲು

ಮಾಡೆಲಿಂಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಈಗಂತೂ ಎಲ್ಲಾ ಯುವಕ- ಯುವತಿಯರಿಗೆ ಮಾಡೆಲಿಂಗ್ ಮಾಡುವುದೆಂದರೆ ತುಂಬಾನೆ ಕ್ರೇಜ್…ತುಂಬಾ ಜನರ ಪ್ರಕಾರ ಮಾಡೆಲಿಂಗ್ ಜಸ್ಟ್ ಫಾರ್ ಟೈಮ್ ಪಾಸ್ ಆದರೆ ಕೆಲವರಿಗೆ ಇದೇ ಜೀವನ ಮತ್ತು ಸಾಧನೆ. ಹೌದು ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಇದೇ ಸಾಧನೆಯತ್ತ ಮುನ್ನುಗ್ಗುತ್ತಿರುವ ಸುರಸುಂದರಾಗನೊಬ್ಬ ಮಿ. ಇಂಡಿಯಾ ಕಿರೀಟ ಮುಡಿಗೇರಿಸಿಕೊಳ್ಳಲು ಪಣತೊಟ್ಟಿದ್ದಾರೆ.

ಇವರು ಆರಡಿ ಕಟೌಟ್ ಹುಡುಗ, ವಯಸ್ಸು ೨೨, ಹೆಸರು ಧೀಮಂತ್. ಆರ್…… ಧರಿಸುವ ಯಾವುದೇ ಉಡುಗೆಗೆ ವಿಶೇಷ ಮೆರಗು ತಂದು ಕೊಡುವ ಧೀಮಂತ್ ಈಗಾಗಲೇ ಮಿಸ್ಟರ್ ಕರ್ನಾಟಕ ಹಾಗೂ ಮಿಸ್ಟರ್ ಸೌತ್ ಇಂಡಿಯಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಂಪಂಗಿರಾಮನಗರದ ರಾಮಚಂದ್ರ ಹಾಗೂ ಭಾರತಿ ದಂಪತಿಗಳ ಪುತ್ರನಾದ ಧೀಮಂತ್ ಅವರದು ಸಂಪ್ರದಾಯಸ್ತ  ಕುಟುಂಬ, ದ್ವಿತೀಯ ಪಿಯುಸಿ ಓದುತ್ತಿದ್ದಾಗ ಹಾಗೇ ಸುಮ್ಮನೇ ಮಾಡೆಲಿಂಗ್ ಕ್ಷೇತ್ರ ಕೈಬೀಸಿ ಕರೆಯಿತು. ಒಂದು ದಿನ ಕಾಲೇಜಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಶರ್ಮಿಳಾ ಎಂಬುವವರು (ಫ್ಯಾಷನ್ ಟೆಕ್ನಾಲಜಿ ಶಿಕ್ಷಕಿ) ನೀನು ಒಳ್ಳೆ ಎತ್ತರ ಇದ್ಯಾ, ನೋಡಲು ಸುಂದರವಾಗಿದ್ಯ  ಯಾಕೆ ರೂಪದರ್ಶಿಯಾಗಬಾರದು ಎಂದು ಹೇಳಿದ್ದರಂತೆ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಧೀಮಂತ್ ಇಂದು ಮಿಸ್ಟರ್ ಇಂಡಿಯಾ ಸ್ಪರ್ಧಿಯಾಗವ ತನಕ ಬೆಳೆದು ನಿಂತಿದ್ದಾರೆ.
ಸದ್ಯ ದಯಾನಂದ ಸಾಗರ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ಮಾಡುತ್ತಿರುವ ಧೀಮಂತ್ ವಿದ್ಯಾಭ್ಯಾಸದಲ್ಲೂ ಹಿಂದೆ ಬಿದ್ದಿಲ್ಲ. ಮಾಡೆಲಿಂಗ್ ಜೊತೆ ಜೊತೆಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗುವ ಹಂಬಲ ಅವರದು.
ನಿಮ್ಮ ಈ ಸಾಧನೆಗೆ ಸ್ಫೂರ್ತಿ?
ಮಾಡೆಲಿಂಗ್ ಕ್ಷೇತ್ರಕ್ಕೆ ಗೊತ್ತಿಲ್ಲದೇ ನನ್ನ ಪ್ರವೇಶ ಆಯಿತು. ಆದರೂ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಮಿಸ್ಟರ್ ವರ್ಲ್ಡ್ ರೋಹಿತ್ ಖಂಡೆಲಾವಾಲ್ ಅವರು ತುಂಬಾನೇ ಇಷ್ಟ ಆಗ್ತಾರೆ. ಹೃತಿಕ್ ಆಲ್ ರೌಂಡರ್ ಆದರೆ, ರೋಹಿತ್ ಅವರು ಪಟ್ಟ ಕಷ್ಟಪಾಡುಗಳು ನಿಜಕ್ಕೂ ಹೆಮ್ಮೆ ಎನಿಸುತ್ತದೆ.
ನಿಮ್ಮ ಈ ಸಾಧನೆಗೆ ನಿಜವಾದ ಬೆಂಬಲ, ಪ್ರೋತ್ಸಾಹ ಯಾರು?
ಮೊದಮೊದಲು ನಾನು ಮಾಡೆಲಿಂಗ್ ಆಗುವುದನ್ನು ತಂದೆ- ತಾಯಿ      ಇಷ್ಟಪಡುತ್ತಿರಲಿಲ್ಲ, ಓದಿನ ಕಡೆ ಹೆಚ್ಚು ಗಮನ ಹರಿಸು ಎಂದು ಹೇಳುತ್ತಿದ್ದರು, ಟೈಟಲ್ ಗೆದ್ದ  ನಂತರ ಜನರು ಗುರುತಿಸಲು ಶುರು ಮಾಡಿದರು, ಆಗ ನಿನ್ನ ನೆಚ್ಚಿನ ಕ್ಷೇತ್ರದಲ್ಲಿ ಮುಂದುವರೆಯಲು ಹೇಳಿ ಪ್ರೋತ್ಸಾಹಿಸಿದರು.
ಜೊತೆಗೆ ನನ್ನ ಸ್ನೇಹಿತರು, ಕಾಲೇಜಿನ ಶಿಕ್ಷಕರು ಎಲ್ಲಾರು ನನಗೆ ಸಾಥ್ ನೀಡಿದ್ದಾರೆ.
ರೂಪದರ್ಶಿಯಾಗಿ ನಿಮಗೆದುರಾದ ಸವಾಲುಗಳು?
ನಾಡಿನ ಶ್ರೇಷ್ಠ ರೂಪದರ್ಶಿಗಳ ಮುಂದೆ ರ್‍ಯಾಂಪ್ ವಾಕ್ ಮಾಡಿ ಅವರ ಮನ ಗೆಲ್ಲಲು ಸಾಕಷ್ಟು ಸವಾಲು ಎದುರಾಗುತ್ತದೆ. ಮಿಸ್ಟರ್ ಸೌತ್
ಇಂಡಿಯಾ ಸ್ಪರ್ಧೆಗಾಗಿ ನಗರದ ಹೊರವಲಯದಲ್ಲಿ ಏರ್ಪಡಿಸಿದ್ದ ೨ ತಿಂಗಳ ಗ್ರೂಮಿಂಗ್ ತರಬೇತಿಯಲ್ಲಿ ಮಾಡೆಲ್‌ಗಳು ಹೇಗಿರಬೇಕು, ಹೇಗೆ ಮಾತನಾಡಬೇಕು, ಸೋಷಲ್ ಮೀಡಿಯಾದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು, ಸೇರಿದಂತೆ ಹಲವಾರು ವಿಷಯಗಳ ನ್ನು ಸೆಲಿಬ್ರಿಟಿಗಳು ಹೇಳಿಕೊಡುತ್ತಾರೆ. ಇದು ನಿಜಕ್ಕೂ ಸ್ಪರ್ಧಿಗಳಿಗೆ ಎದುರಾಗುವ ಸವಾಲುಗಳಿಗೆ ದಿಟ್ಟ ಹೆಜ್ಜೆ ಇಡಲು ನೆರವಾಗುತ್ತದೆ.
ನಿಮ್ಮ ವರ್ಕ್ ಔಟ್ ಹಾಗೂ ಡಯೆಟಿಂಗ್ ಬಗ್ಗೆ…
ಬೆಳಗ್ಗೆ ೭ ಕ್ಕೆ ನನ್ನ ದಿನ ಪ್ರಾರಂಭ, ಬೆಳಿಗ್ಗೆ ಎದ್ದು ಕೂಡಲೇ ೨ ಲೋಟ ನೀರು, ಬೇಯಿಸಿದ ಮೊಟ್ಟೆ, ಹಾಲು ಸೇವಿಸುತ್ತೇನೆ. ೧೦-೧೧ ಗಂಟೆಗೆ ದೋಸೆ ಅಥವಾ ಚಪಾತಿ, ಮಧ್ಯಾಹ್ನ ಸ್ಟೀಮ್ ತರಕಾರಿ , ೨೦೦ ಗ್ರಾಂ ಕೋಳಿ ಖಾದ್ಯ, ಹಾಗೂ ೨ ಚಮಚ ರೈಸ್  ಸಂಜೆ ಒಣಹಣ್ಣುಗಳ ಮಿಲ್ಕ್ ಶೇಕ್, ನಂತರ ಜಿಮ್‌ಗೆ ಹೋಗಿ  ಕೋಚ್ ಸುರೇಶ್, ಮಂಜುನಾಥ್, ರವಿ ಅವರಿಂದ ದೇಹಕ್ಕೆ ಬೇಕಾದ ಕಸರತ್ತು ಮಾಡಿ ಮೈಕಟು ಕಾಪಾಡಿಕೊಳ್ಳುತ್ತೇನೆ. ಜಿಮ್‌ನಿಂದ ಬಂದ ಮೇಲೆ ಮನೆಯಲ್ಲಿ ತಯಾರಿಸಿದ ಮಿಲ್ಕ್ ಶೇಕ್, ರಾತ್ರಿ  ಊಟಕ್ಕೆ ೧೫೦ ಗ್ರಾಂ ಕೋಳಿ ಖಾದ್ಯ, ಬೇಯಿಸಿದ ತರಕಾರಿ ಹಾಗೂ ರೈಸ್‌ನ್ನು ಸೇವಿಸುತ್ತೇನೆ.

ಫ್ರೀ ಟೈಮಲ್ಲಿ ಹಾಗೂ   ಹವ್ಯಾಸಗಳು?
ಮಾಡೆಲಿಂಗ್ ಬಿಟ್ಟು ಟೀಕ್ವಾಂಡೋದಲ್ಲಿ( ಮಾರ್ಷಲ್ ಆರ್ಟ್) ಬ್ಲಾಕ್‌ಬ್ಲೇಟ್ ಆಗಿರುವ ನಾನು ರೂಪದರ್ಶಿಯಾಗಿ ವೇದಿಕೆ ಮೇಲೆ ಭಿನ್ನ ರೀತಿಯಾ ಟ್ಯಾಲೆಂಟ್ ತೋರಿಸಲು ಈ ಕಲೆ ತುಂಬಾನೆ ಸಹಕರಿಯಾಗಿದೆ. ಹಾಗಾಗಿ ಇದನ್ನು ಹವ್ಯಾಸವಾಗಿ ಮುಂದುವರೆಸುತ್ತೇನೆ. ಇನ್ನು ಫ್ರೀ ಟೈಮ್‌ನಲ್ಲಿ ಸಾಮಾನ್ಯ ಜ್ಞಾನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ.

ಸ್ಯಾಂಡಲ್‌ವುಡ್‌ನಲ್ಲಿ ನೆಚ್ಚಿನ ನಟ-ನಟಿ ಹಾಗೂ ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿದೆಯೇ?
ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನನ್ನ ನೆಚ್ಚಿನ ಸ್ಟಾರ್‌ಗಳಾಗಿದ್ದಾರೆ. ಯೂತ್ ಐಕಾನ್ ಆಗಿರುವ ಈ ಇಬ್ಬರ ಡೆಡಿಕೇಶನ್ ಇಷ್ಟ ಆಗುತ್ತೆ. ಸದ್ಯಕ್ಕೆ ಅನೇಕ ಕಡೆ ರೂಪದರ್ಶಿಯಾಗಿ ಪ್ರಚಾರ ಮಾಡಲು ಅವಕಾಶ ಸಿಕ್ಕಿದೆ. ಕಿರುತೆರೆಯಲ್ಲಿ ನಟಿಸುವಂತೆ ಅವಕಾಶ ಬಂದಿತ್ತು ಆದರೆ ಮೊದಲು ಗುರಿ ಮುಟ್ಟುವ ಕಡೆ ನನ್ನ ಚಿತ್ತ.

ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಬಯಸುವ ರೂಪದರ್ಶಿಗಳಿಗೆ ನಿಮ್ಮ ಸಲಹೆ?
ರಾತ್ರಿ ಕಂಡ ಕನಸ್ಸು ನನಸಾಗಲು ಸಮಯ ಹಿಡಿಯುತ್ತದೆ. ಹಾಗಾಗಿ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು, ಏಕಗ್ರತೆ, ತಾಳ್ಮೆ ಎಲ್ಲವು  ಇದ್ದರೇ ಗುರಿ ತಲುಪಲು ದಾರಿ ತೆರೆದುಕೊಳ್ಳುತ್ತದೆ.  ಜೊತೆಗೆ ರೂಪದರ್ಶಿಯಾಗಲು ವ್ಯಾಯಾಮದೊಂದಿಗೆ ಸರಿಯಾದ ಆಹಾರ ಪದ್ಧತಿ  ರೂಢಿಸಿಕೊಳ್ಳಿ ಎಂಬುದು ಅವರ ಕಿವಿ ಮಾತು.

Leave a Comment