ಮಾ. 24 ರಂದು ಶಾಸಕ ಸ್ಥಾನಕ್ಕೆ ಜೆಡಿಎಸ್ ಬಂಡಾಯ ಶಾಸಕರ ರಾಜೀನಾಮೆ

ಬೆಂಗಳೂರು, ಮಾ. ೧೪- ರಾಜ್ಯಸಭೆ ಚುನಾವಣೆ ಮುಗಿಯುತ್ತಿದ್ದಂತೆ ಜೆಡಿಎಸ್‌ನ 7 ಬಂಡಾಯ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಮಾರ್ಚ್ 23 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಬಳಿಕ 24ರಂದು ತಮ್ಮ ಶಾಸಕ ಸ್ಥಾನಕ್ಕೆ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್, ಹೆಚ್.ಸಿ. ಬಾಲಕೃಷ್ಣ, ರಮೇಶ್ ಬಂಡಿಸಿದ್ದನಗೌಡ, ಇಕ್ಬಾಲ್ ಅನ್ಲಾರಿ, ಭೀಮಾ ನಾಯ್ಕ, ಅಖಂಡ ಶ್ರೀನಿನಾಸಮೂರ್ತಿ ಸೇರಿದಂತೆ 7 ಮಂದಿ ರಾಜೀನಾಮೆ ನೀಡಿಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

25ರಂದು ಮೈಸೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಈ ಏಳೂ ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.

2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಶಾಸಕ ಗೋಪಾಲಯ್ಯ ಸೇರಿದಂತೆ 8 ಮಂದಿಯನ್ನು ಜೆಡಿಎಸ್ ಅಮಾನತ್ತು ಮಾಡಿತ್ತು. ಅದರಲ್ಲಿ ಗೋಪಾಲಯ್ಯ ಮರಳಿ ಜೆಡಿಎಸ್ ಪಕ್ಷಕ್ಕೆ ತೆರಳಿದ್ದರು. ಇನ್ನುಳಿದಂತೆ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಏಳು ಶಾಸಕರು ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದರು. ಇದೇ 25ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಮುಂದಾಗಿದ್ದಾರೆ.

ಈ ತಿಂಗಳ 23ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಏಳೂ ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದು ಬಹುತೇಕ ಖಚಿತವಾಗಿದೆ.

Leave a Comment