ಮಾಸ್ತಿಗುಡಿ ಮುಂದೆ ಮತ್ತೊಂದು ಚಿತ್ರ ಬೇಡ

ಕಳೆದ ಶುಕ್ರವಾರ ಶಿವರಾತ್ರಿಯಂದು ನಡೆದ ಮಾಸ್ತಿಗುಡಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಡುಗಳ ಪ್ರದರ್ಶನ ಅಬ್ಬರವಿದ್ದರೂ ಎರಡು ಜೀವಗಳು ಬಲಿಯಾದ ದು:ಖ ಮಾತಿಗಿಂತ ಮೌನವೇ ಹೆಚ್ಚಾಗುವಂತೆ ಮಾಡಿತ್ತು.

ಹಾಡುಗಳಲ್ಲಿ ಹರಿದ್ವರ್ಣ ಕಾಡುಗಳ ಪರಿಸರ ಕಣ್ಣಿಗೆ ಕಟ್ಟುವಂತಿದ್ದರೂ ನಾಯಕ ವಿಜಯ್ ಸಹಜ ಅಭಿನಯ ಎದ್ದು ಕಾಣುತ್ತಿತ್ತು. ಜೊತೆಗೆ ಅವರಿಗೆ ಎದುರಾಗಿ ನಿಲ್ಲುವ ಉದಯ್, ಅನಿಲ್ ದೇಹಸಿರಿ ನೋಡಿದಾಗ ಇಂತಹ ಅದ್ಬುತ ಖಳ ನಟರನ್ನು ಕಳೆದುಕೊಂಡೆವಲ್ಲಾ ಎನ್ನುವ ನೋವನ್ನು ಉಂಟು ಮಾಡುತ್ತಿತ್ತು.

ನಿಗಧಿಯಾಗಿದ್ದಕ್ಕಿಂತ ತೀರಾ ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಹಿರಿಯ ನಟ ಅಂಬರೀಷ್ ಆಗಮಿಸಿದ ಕೂಡಲೇ ಚಿತ್ರ ಟೀಸರ್ ಹಾಡೊಂದನ್ನು ತೋರಿಸಿ ಹಾಡುಗಳ ಸಿಡಿಯನ್ನು ಬಿಡುಗಡೆ ಮಾಡಲಾಯಿತು.

ಅಂಬರೀಶ್ ಮಾತನಾಡಿ ಟೀಜರ್, ಹಾಡಿನಲ್ಲಿ ಮಾಸ್ತಿಗುಡಿಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ನಮ್ಮನ್ನಗಲಿದ ಇಬ್ಬರು ಇದ್ದಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಈಗ ಸಂತಸ ಪಡುವ ಸ್ಥಿತಿಯಲ್ಲಿ ನಾವಿಲ್ಲ ಮಾಸ್ತಿಗುಡಿಯಂತಹ ಅತ್ಯುತ್ತಮ ಚಿತ್ರಕ್ಕೆ ಇಂತಹ ಸ್ಥಿತಿ ಬಂತಲ್ಲ ಎನಿಸುತ್ತದೆ ಆಗಿದ್ದು ಆಗಿ ಹೋಗಿದೆ ಮುಂದೆ ಎನು? ಎನ್ನುವುದನ್ನು ಯೋಚಿಸಬೇಕಿದೆ ಎಂದರು.

ಭವಿಷ್ಯದ ಕನಸುಗಳನ್ನು ಕಾಣುತ್ತಿದ್ದ ಕಲಾವಿದರಿಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಕೊನೆಯ ಚಿತ್ರವಾದ ಮಾಸ್ತಿಗುಡಿ ಅವರಿಗೆ ಸೇರಿದ್ದು ಅದರಿಂದಾಗಿ ಮಾಸ್ತಿಗುಡಿ ಗೆಲ್ಲಬೇಕು ಮಾಸ್ತಿಗುಡಿ ಬಿಡುಗಡೆಯಾಗುವ ದಿನ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ. ಮಾಸ್ತಿಗುಡಿಯನ್ನು ಗೆಲ್ಲಿಸಿ ಆ ಮೂಲಕ ಚಿತ್ರಕ್ಕಾಗಿ ಜೀವ ಕಳೆದುಕೊಂಡ ಎರಡು ಜೀವಗಳ ಕುಟುಂಬಗಳಿಗೆ ಅನುಕೂಲ ಮಾಡಿಕೊಡೋಣ ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ನಿರ್ದೇಶಕ ನಾಗಶೇಖರ್ ಹೆಚ್ಚು ಮಾತನಾಡಲಿಲ್ಲ ಬೇರೆಯವರಿಗೆ ಮೈಕ್ ಕೊಟ್ಟು ಮಾತನಾಡಿಸಿ ಅದನ್ನು ನೋಡಿ ಖುಷಿಪಡುತ್ತಿದ್ದರು. ಸಂಗೀತ ನೀಡಿರುವ ಸಾಧುಕೋಕಿಲ ಸುಂದರ ತಾಣಗಳಲ್ಲಿ ಸಿನೆಮಾದ ಚಿತ್ರೀಕರಣ ಮಾಡಲಾಗಿದೆ ಕಾಡು ಮೇಡಲ್ಲಿ ಅಲೆದು, ನೀರಿನಲ್ಲಿ ಮುಳುಗಿ ಎರಡು ಪ್ರಾಣಗಳನ್ನು ಒತ್ತೆಯಿಟ್ಟು ಪರಿಸರಕ್ಕಾಗಿ ಮಾಡಿದ ಈ ಸಿನೆಮಾ ಯಶಸ್ವಿಯಾಗಬೇಕು ಎಂದರು.

ಕಳೆದ ೨೫ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ ಮಾಸ್ತಿಗುಡಿಯ ಕತೆ ಚಿತ್ರೀಕರಣಗೊಂಡ ಪರಿಸರ ನೋಡಿ ಸಂಗೀತ ನೀಡಿದ್ದೇನೆ ನನಗೆ ಗೊತ್ತಿರುವ ಎಲ್ಲಾ ರೀತಿಯ ಸಂಗೀತವನ್ನು ಈ ಸಿನಿಮಾಕ್ಕಾಗಿ ಬಳಸಿದ್ದೇನೆ ಎಂದರು ಸಾಧುಕೋಕಿಲ.

ಕವಿರಾಜ್ ಮಾತನಾಡಿ ನಾಗಶೇಖರ್‌ಗೆ ಸಿನೆಮಾ ಎನ್ನುವ ಹುಚ್ಚಿದೆ ಅವರಿಗೆ ಸಾಹಿತ್ಯ ಕೊಡುವುದು ಕಷ್ಟದ ಕೆಲಸ. ಒಳ್ಳೆಯ ಹಾಡುಗಳನ್ನು ನನ್ನಿಂದ ಬರೆಸಿದ್ದಾರೆ ಒಂದಕ್ಕೊಂದು ಇಂಪಾಗಿವೆ ಎಂದರೆ, ನಟ ರವಿಶಂಕರ್ ಗಂಧದಗುಡಿಯ ಮಾಸ್ತಿಗುಡಿ ಮುಂದೆ ಮತ್ತೊಂದು ಚಿತ್ರ ಬೇಡ ನಂತರ ಪರಿಸ ಉಳಿಸುವ, ಕಾಡುಮೇಡಿನ ಪ್ರೀತಿ ಹೆಚ್ಚಿಸುವಾಗಿ ಮಾಸ್ತಿಗುಡಿ ಬಂದಿದೆ. ಸುಂದರವಾದ ಕತೆ ಇದೆ ಚಾಮುಂಡಿ ದೇವಿಯದೇ ಹೆಸರು ಮಾಸ್ತಮ್ಮ. ಕಾಡೊಂದರಲ್ಲಿ ಇರುವ ದೇವಿಯ ಹೆಸರು ಮಾಸ್ತಮ್ಮ ಇದೇ ಶೀರ್ಷಿಕೆಯನ್ನೊಳಗೊಂಡ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ಆಶಯ ವ್ಯಕ್ತಪಡಿಸಿದರು.

ಚಿತ್ರರಂಗದಲ್ಲಿ ಸುಖ ದು;ಖ ಕಂಡಿದ್ದೇನೆ ಸಿನೆಮಾಕ್ಕಾಗಿ ಕಷ್ಟಪಟ್ಟಿದ್ದೇವೆ ಎಂದ ನಾಯಕ ದುನಿಯಾ ವಿಜಿ ಹೆಚ್ಚು ಮಾತನಾಡಲಿಲ್ಲ ಅವರಲ್ಲಿ ಗೆಳೆಯರನ್ನು ಕಳೆದುಕೊಂಡ ದುಃಖವಿತ್ತು. ಸುಂದರ್ ಪಿ ಗೌಡ ನಿರ್ಮಿಸಿರುವ ಮಾಸ್ತಿಗುಡಿ ಏಪ್ರಿಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

Leave a Comment