ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾ‌ಡಿ

ಬ್ಯಾಡಗಿ, ಮೇ 24- ಲಾಕ್ ಡೌನ್ ನಿಯಮ ಸಡಿಲಿಕೆ ನಂತರ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್’ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೈನಂದಿನ ಜೀವನ ನಡೆಸಲು ಕ್ರಮ ವಹಿಸಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಸ್ಥಳೀಯ ತಾಲೂಕಾ ಪಂಚಾಯತ ಆವರಣದಲ್ಲಿ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರವರು ತಾಲೂಕಿನ ವಿಕಲಚೇತನರಿಗಾಗಿ ನೀಡಿದ್ದ ದಿನಸಿ ಕಿಟ್’ಗಳನ್ನು ವಿತರಿಸಿ ಮಾತನಾಡಿದ ಅವರು ಲಾಕ್ ಡೌನ್ ಸಡಿಲಿಕೆ ಅಥವಾ ಸಂಪೂರ್ಣವಾಗಿ ತೆಗೆದು ಹಾಕಿದ ನಂತರ ನಾವು ಕೊರೋನಾ ವೈರಸ್’ನಿಂದ ಮುಕ್ತರಾಗುತ್ತೇವೆ ಎಂದು ಭಾವಿಸುವುದು ತಪ್ಪು, ಲಾಕ್ ಡೌನ್ ನಿಯಮವನ್ನು ತೆಗೆದು ಹಾಕಿದ ನಂತರ ಕನಿಷ್ಠ ಎಂಟು ವಾರಗಳವರೆಗೆ ಎಲ್ಲ ವಯಸ್ಸಿನ ಜನರಿಗೂ ನಿರ್ಣಾಯಕ ಘಟ್ಟವಾಗಿದ್ದು, ಇದು ಪ್ರತಿಯೊಬ್ಬರಿಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಮುನ್ಸೂಚನೆಯನ್ನು ನೀಡಿದೆ ಎಂದರಲ್ಲದೆ ಕೇಂದ್ರ ಸರ್ಕಾರವು ದೇಶದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಇಪ್ಪತ್ತು ಲಕ್ಷ ಕೋಟಿ ರೂಗಳ ವಿಶೇಷ ಪ್ಯಾಕೇಜನ್ನು ಘೋಷಿಸಿ ಕೊರೋನಾ ಸಂಕಷ್ಟದಿಂದ ಚೇತರಿಸಿಕೊಳ್ಳಲು ಯೋಜನೆ ರೂಪಿಸಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಛತ್ರದ, ಮುರಿಗೆಪ್ಪ ಶೆಟ್ಟರ, ಸುರೇಶ ಆಸಾದಿ, ವಿಷ್ಣುಕಾಂತ ಬೆನ್ನೂರ, ಜಿತೇಂದ್ರ ಸುಣಗಾರ, ಪಾಂಡುರಂಗ ಸುತಾರ, ಶಾಸಕರ ಆಪ್ತ ಸಹಾಯಕ ಬಸವರಾಜ ಕುಲ್ಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share

Leave a Comment