ಮಾವುಗೆ ಸಿಗದ ಮಾರುಕಟ್ಟೆ: ರೈತ ಕಂಗಾಲು

ಮಧುಗಿರಿ, ಮೇ ೨೬- ಬಯಲು ಸೀಮೆಯಲ್ಲಿ ಮಳೆಯಾಧಾರಿತ ಕೃಷಿ ಭೂಮಿಯ ಮೂಲಕ ಹನಿ ನೀರು ಪೋಲಾಗದಂತೆ ರುಚಿ ರುಚಿಯಾಗಿ ಬೆಳೆದ ಮಾವಿನ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರಕಟ್ಟೆಗೆ ಮುಕ್ತ ಅವಕಾಶ ಸಿಗದೆ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಕೊಡಗೇನಹಳ್ಳಿ ಹೊಬಳಿಯ ದೊಡ್ಡಮಾಲೂರು ಹೊರವಲಯದಲ್ಲಿ ವಾಸವಿರುವ ರೈತ ಕೆ. ಅಂಜಿನಪ್ಪ ದೊಡ್ಡಮಾಲೂರು ಸರ್ವೆ 287 ರಲ್ಲಿ 40 ಎಕರೆಯಲ್ಲಿ ವಿವಿಧ ರೀತಿಯ ಮಾವು ಬೆಳೆದಿದ್ದು, ಗುಣಮಟ್ಟ ಹಾಗೂ ಆನ್ ಸೇವೆಯಿಂದ ಇಲ್ಲಿನ ಮಾವು ರಾಜಧಾನಿಯಲ್ಲಿ ಹೆಸರು ಮಾಡಿದ್ದು ಬೇಡಿಕೆ ಹೆಚ್ಚಾಗಿದೆ.
ತೋಟಗಾರಿಕೆ ಯೋಜನೆಯಡಿ 12 ಲಕ್ಷ ವೆಚ್ಚದ 53 ಮೀ ಉದ್ದ 53 ಮೀ ಅಗಲ ವಿಸ್ತೀರ್ಣದ ಒಂದು ಕೋಟಿ ಲೀ ನೀರು ಶೇಖರಣೆಗೆ ಸಮುದಾಯ ಕೃಷಿ ಹೊಂಡ ನಿರ್ಮಿಸಿ ಸುಮಾರು 4000 ಸಾವಿರ ಮಾವಿನ ಗಿಡಗಳನ್ನು ಪೋಷಿಸುತ್ತಿದ್ದು, ಮ್ಯಾಂಗೋ ಟೋರ್ ಮೂಲಕ ಬರುವ ಗ್ರಾಹಕರಿಗೆ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.
ಪ್ರತಿ ವರ್ಷ ಮಾವಿನ ಸೀಸನ್‍ನಲ್ಲಿ ಮಾವು ಮಂಡಳಿ ದರ ನಿಗದಿಪಡಿಸಿ ಚೌಕಾಸಿ ಮಾಡದೆ ಕನಿಷ್ಠ 6 ಕೆ.ಜಿ. ಮಾವು ಖರೀದಿಸಬೇಕೆಂಬ ಷರತ್ತಿನೊಂದಿಗೆ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿಯು ಮ್ಯಾಂಗೋ ಪಿಕ್ಕಿಂಗ್ ಆಯೋಜಿಸುತ್ತಾ ಬಂದಿದ್ದು, ಸುಮಾರು 300 ಗ್ರಾಹಕರು ಕುಟುಂಬದ ಸಮೇತ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಎಫೆಕ್ಟ್‌ನಿಂದ ಮಾವು ಮಂಡಳಿ ಮ್ಯಾಂಗೋ ಟೂರ್ ಘೋಷಣೆ ಮಾಡದ ಕಾರಣ ಗ್ರಾಹಕರು ಮ್ಯಾಂಗೋ ಪಿಕ್ಕಿಂಗ್ ಮಾಡಲು ಕಾತರರಾಗಿದ್ದಾರೆ.
ಬರುವ ಮಾವು ಪ್ರಿಯರಿಗೆ ಇಲ್ಲಿ ಹೊಟ್ಟೆ ತುಂಬಾ ಊಟ ನೀಡಿ ತೋಟದಲ್ಲಿರುವ ಮಾವಿನ ವಿವಿಧ ತಳಿಯ ಬಗ್ಗೆ ಮಾಹಿತಿ ನೀಡುತ್ತಾರೆ. ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರಿಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಕೇಸರ್ ರತ್ನ, ಬೆನಿಶಾ, ರೆಸಪೂರಿ, ಬಾದಾಮಿ ಮತ್ತಿತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ಖರೀದಿಸುತ್ತಾರೆ.
ಆನ್‍ಲೈನ್ ಬುಕ್ಕಿಂಗ್
ಮಾವು ಮಂಡಳಿ ಹಾಗೂ ಅಂಚೆ ಇಲಾಖೆಯ ಸಹಕಾರದೊಂದಿಗೆ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣನ್ನು ತಲುಪಿಸಲು ಪೋಸ್ಟ್ ಡೆಲಿವೆರಿ ಸೌಲಭ್ಯ ಕಲ್ಪಿಸಿದ್ದು, ನೋಂದಣಿಗಾಗಿ www.ksmdmcl.org ಅಥವಾ  karsirimangoes.karnataka.gov.in  ಇದರಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖೆ, ಅಪ್ಡೇಟ್ ಮಾಡಿ ಬೇಕಾದ ಬ್ರ್ಯಾಂಡ್ ಹಣ್ಣನ್ನು ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ: 8453062389 ಅಥವಾ 9141945046 ಗೆ ಸಂಪರ್ಕಿಸಬಹುದು.
ಮಾವು ಸಾಗಿಸಲು ಯಾವುದೇ ಅಡ್ಡಿ ಇಲ್ಲ. ಮಾರಾಟ ಮಾಡಲು ತುಮಕೂರು ನಗರದ ಜನತೆಗೆ ಅನುಕೂಲವಾಗುವಂತೆ ಮಾವು ಮೇಳ ಆರಂಭಿಸಿದ್ದು, ವಾರ್ಡ್ ವೈಸ್ 15 ಸ್ಟಾಲ್ ತೆರೆಯಲು ತೋಟಗಾರಿಕೆ ಇಲಾಖೆ ಸಿದ್ಧತೆಯಲ್ಲಿದ್ದು, ಮಾವು ಬೆಳೆಗಾರರು ಡೆಪ್ಯೂಟಿ ಡೈರೆಕ್ಟರ್ ಕಚೇರಿಗೆ ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಬಹುದು.
ಈ ಬಾರಿ ನೀರಿಲ್ಲದೆ ಬೆಳೆ ಕಡಿಮೆಯಾಗಿದ್ದು, ಕೋವಿಡ್-19 ಕಾರಣದಿಂದ ಗ್ರಾಹಕರು ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮ್ಯಾಂಗೋ ಟೋರ್ ಆಯೋಜಿಸಿದರೆ ಉತ್ತಮ. ಗ್ರಾಹಕರು ಆನ್‍ಲೈನ್ ಬುಕ್ ಮಾಡಿದರೆ ಮನೆ ಬಾಗಿಲಿಗೆ ಮಾವು ತಲುಪಿಸುತ್ತೇವೆ ಎನ್ನುತ್ತಾರೆ ರೈತ ಅಂಜಿನಪ್ಪ.

Share

Leave a Comment