ಮಾವಿನಕೆರೆ : ದುರ್ವಾಸನೆ – ಸ್ವಚ್ಛತೆಗೆ ಆಗ್ರಹ

ರಾಯಚೂರು.ಅ.19- ಐತಿಹಾಸಿಕ ಮಾವಿನಕೆರೆ ತ್ಯಾಜ್ಯ ನೀರು ಸಂಗ್ರಹ ಕೇಂದ್ರವಾಗಿಸಿದ ಪರಿಣಾಮ ವಾರ್ಡ್ 4 ಸೇರಿದಂತೆ ಕೆರೆ ಬದಿಯ ನಿವಾಸಿಗಳು ದುರ್ವಾಸನೆ ಮತ್ತು ಮಾರಣಾಂತಿಕ ಡೆಂಘ್ಯೂ ಇನ್ನಿತರ ರೋಗಗಳಿಗೆ ತುತ್ತಾಗುವಂತೆ ಮಾಡಿದ್ದು, ತಕ್ಷಣವೇ ಜಿಲ್ಲಾಡಳಿತ ಮತ್ತು ನಗರಸಭೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ನಗರಸಭೆ ಸದಸ್ಯ ಬಿ.ರಮೇಶ ಅವರು ಒತ್ತಾಯಿಸಿದ್ದಾರೆ.
ಕೆರೆಯಲ್ಲಿ ಸೊಳ್ಳೆ ಮತ್ತು ದುರ್ವಾಸನೆ ಹಿನ್ನೆಲೆಯಲ್ಲಿ ಇಂದು ಇವುಗಳ ನಿಯಂತ್ರಣಕ್ಕೆ ಬ್ಲೀಚಿಂಗ್ ಪೌಡರ್, ಸಿಂಪಡಿಸಲಾಗಿದೆ. ಕೆರೆಯ ಒಡ್ಡುಗಳಲ್ಲಿ ಭಾರೀ ಪ್ರಮಾಣದ ಹೊಂಡು ಶೇಖರಣೆಗೊಂಡು ದಿನೇ ದಿನೇ ದುರ್ವಾಸನೆ ಹೆಚ್ಚುತ್ತಿದೆ. ಅಕ್ಕಪಕ್ಕದ ಜನ ವಾಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆ ಅಭಿವೃದ್ಧಿಗೆ 7.36 ಲಕ್ಷ ಅನುದಾನ ಬಿಡುಗಡೆಯಾಗಿರುವುದಾಗಿ ಹೇಳಲಾಗಿದೆ.
ಆದರೆ, ಇಲ್ಲಿವರೆಗೂ ಕಾಮಗಾರಿ ಕೈಗೊಳ್ಳದ ಕಾರಣ ಪರಿಸ್ಥಿತಿ ಗಂಭೀರವಾಗಿದೆ. ಕೆರೆ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ, ಇಲ್ಲಿವರೆಗೂ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಇದರಿಂದಾಗಿ ಮಾವಿನಕೆರೆಯಲ್ಲಿ ಮಲಿನ ನೀರು ಹೆಚ್ಚಿ, ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಕ್ಷಣವೇ ಈ ಬಗ್ಗೆ ಗಮನ ಹರಿಸಿ, ಮಾವಿನಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಮಾವಿನಕೆರೆ ಏರಿಯಾ ಮೇಲೆ ಸಾರ್ವಜನಿಕರು ಮುಂಜಾನೆ ಮತ್ತು ಸಂಜೆ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಪಕ್ಕದಲ್ಲಿಯೇ ಉದ್ಯಾನವನವಿದೆ. ಮಾವಿನ ಕೆರೆ ಸ್ವಚ್ಛತೆ ಸಮಸ್ಯೆಯಿಂದಾಗಿ ಸಾರ್ವಜನಿಕರು ನಾನಾ ರೀತಿಯ ತೊಂದರೆಗಳಿಗೆ ಗುರಿಯಾಗಬೇಕಾಗಿದೆ. ಈ ಸಮಸ್ಯೆ ನಿವಾರಿಸಲು ಜಿಲ್ಲಾಡಳಿತ ಮತ್ತು ನಗರಸಭೆ ಕೂಡಲೇ ಮಾವಿನಕೆರೆ ಸ್ವಚ್ಛತೆಗೆ ಮುಂದಾಗುವಂತೆ ಕೋರಿದ್ದಾರೆ.

Leave a Comment