ಮಾವಿನಕುಂಟೆ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಶಾಸಕ ಗೌರಿಶಂಕರ್

ತುಮಕೂರು, ಮೇ ೨೬- ತಾಲ್ಲೂಕಿನ ಬೆಳ್ಳಾವಿ ಸಮೀಪದ ಮಾವಿನಕುಂಟೆ ಗ್ರಾಮದ ವಾಸಿ ಹಾಗೂ ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಶಾಸಕ ಡಿ.ಸಿ. ಗೌರಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಗ್ರಾಮದ ಸುಮಾರು 80ಕ್ಕೂ ಅಧಿಕ ಮನೆಗಳಿಗೆ 20 ಕೆ.ಜಿ. ದಿನಸಿ ಪದಾರ್ಥಗಳ ಕಿಟ್ ಮತ್ತು  ತರಕಾರಿ ಕಿಟ್‌, ಸ್ಯಾನಿಟೈಸರ್, ಮಾಸ್ಕ್‌ಗಳನ್ನು ಪ್ರತಿ ಮನೆ ಮನೆಗೂ ವಿತರಿಸಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದರು.
ನಂತರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡದೊಂದಿಗೆ ಮಾತನಾಡಿದ ಶಾಸಕ ಗೌರಿಶಂಕರ್, ಸೋಂಕು ತಗುಲಿರುವ ಕೆಎಸ್ಸಾರ್ಟಿಸಿ ಚಾಲಕನ ಬಗ್ಗೆ ಮಾಹಿತಿ ಪಡೆದು, ಆತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 25 ಮಂದಿಯನ್ನು ಕ್ವಾರಂಟೈನ್ ಮಾಡಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದರು.
ಕ್ವಾರಂಟೈನ್ ಮಾಡಿರುವವರನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕದೇ ಬೇರೆ ಬೇರೆ ದೊಡ್ಡ ದೊಡ್ಡ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಬೇಕು. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ರೋಗ ನಿವಾರಕ ಔಷಧಿಯನ್ನು ಸಂಪಡಿಸುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಂಟೈನ್ಮೆಂಟ್ ಝೋನ್ ಆಗಿರುವ ಈ ಗ್ರಾಮದ ಎಲ್ಲ ಮನೆಗಳಿಗೆ ಬೇಕಾಗಿರುವ ದಿನಸಿ, ಮಾಸ್ಕ್, ಸ್ಯಾನಿಟೈಸರ್‌ಗಳನ್ನು ತಾವೇ ಒದಗಿಸುವುದಾಗಿ ಹೇಳಿದ ಅವರು, ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಿ ರೋಗ ತ‌ಡೆಗೆ ಸಹಕರಿಸಬೇಕು ಎಂದರು.
ಕೊರೊನಾ ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಗ್ರಾಮಸ್ಥರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಹಾಗೆಯೇ ಕ್ವಾರಂಟೈನ್‌ನಲ್ಲಿರುವ ಬಗ್ಗೆ ಪ್ರೀತಿ-ವಿಶ್ವಾಸ ತೋರಬೇಕು. ವಿನಾ ಕಾರಣ ಅವರನ್ನು ದೂಷಿಸಬಾರದು. ಬದಲಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಬೇಕು ಎಂದು ಹೇಳಿದರು.
ಕೊರೊನಾ ವಾರಿಯಱ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದ ಅವರು, ಅಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ಔಷಧಿ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದರೆ ಸರ್ಕಾರವನ್ನು ಕಾಯದೆ ತಮಗೆ ತಿಳಿಸಿದರೆ ತಕ್ಷಣ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a Comment