ಮಾಲೇಕಲ್ಲು ತಿರುಪತಿಯಲ್ಲಿ ಅನ್ನ ಸಂತರ್ಪಣೆ ಸ್ಥಗಿತ

ಅರಸೀಕೆರೆ, ಜ. ೧೧- ಶ್ರೀ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಕಾರ್ಯವನ್ನು ಮುಜರಾಯಿ ಇಲಾಖೆ ಆರಂಭಿಸಿಲ್ಲ. ಯಾರೋ ಕೆಲವು ಭಕ್ತರು ಪ್ರತಿ ಶನಿವಾರ ಅನ್ನ ಸಂತರ್ಪಣೆ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ನಡೆದಿರುವ ಪ್ರಕರಣಗಳ ಪರಿಣಾಮ ಹಾಗೂ ವಿದ್ಯಮಾನಗಳನ್ನು ಗಮನಿಸಿ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ತಹಶೀಲ್ದಾರ್ ನಟೇಶ್ ತಿಳಿಸಿದರು.

ರಾಜ್ಯದಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ನಗರ ಸಮೀಪದ ಮಾಲೇಕಲ್ಲು ತಿರುಪತಿಯ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ ವಿಷ ಪ್ರಸಾದ ಪ್ರಕರಣದ ಬಿಸಿ ತಟ್ಟಿದೆ. ಕಳೆದ ಎರಡು ವರ್ಷಗಳಿಂದ ಪ್ರತಿ ಶನಿವಾರದಂದು ನಡೆಯುತ್ತಿದ್ದ ಅನ್ನ ಸಂತರ್ಪಣೆ ಕಾರ್ಯ ವೈಕುಂಠ ಏಕಾದಶಿ ಬಳಿಕ ಸ್ಥಗಿತಗೊಂಡಿದೆ.

ನಗರದ ಸಮೀಪದಲ್ಲಿರುವ ಶ್ರೀ ಕ್ಷೇತ್ರಕ್ಕೆ ಪ್ರತಿ ನಿತ್ಯ ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಶನಿವಾರ ದೇವರ ಪೂಜಾ ಕಾರ್ಯದಲ್ಲಿ ಭಾಗವಹಿಸಲು ಆಗಮಿಸುತ್ತಾರೆ. ಭಕ್ತರಿಗೆ ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ಮೂಲಕ ದೊರೆಯುತ್ತಿದ್ದ ಊಟದ ವ್ಯವಸ್ಥೆ ಇಲ್ಲದೆ ಉಪವಾಸ ತೆರಳುವಂತಾಗಿದೆ.

ಈ ಸಂಬಂಧ ಮುಜರಾಯಿ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಉತ್ಸವ ಸಮಿತಿ ನಡುವೆ ದಾಸೋಹ ಪುನರಾರಂಭಿಸುವಂತೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ಸಾಧ್ಯವಾಗಿಲ್ಲ. ದೇವಾಲಯಕ್ಕೆ ಬರುವ ಭಕ್ತಾದಿಗಳು ಉಪವಾಸದಿಂದ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಅರ್ಚಕರು ಹಾಗೂ ಗ್ರಾಮದ ಕೆಲವು ಮುಖಂಡರು ದಾನಿಗಳ ನೆರವಿನಿಂದ ಕಳೆದ ಎರಡು ವರ್ಷಗಳ ಹಿಂದೆ ಪ್ರತಿ ಶನಿವಾರ ದಾಸೋಹ ಕಾರ್ಯ ಆರಂಭಿಸಿದರು. ಇದೀಗ ದಾನಿಗಳು ನೀಡುತ್ತಿರುವ ಹಣದ ವಿಚಾರದಲ್ಲಿ ಉಂಟಾಗಿರುವ ಆಂತರಿಕ ಅಸಮಾಧಾನದಿಂದ ದಾಸೋಹ ಪ್ರಕ್ರಿಯೆ ಸ್ಥಗಿತಗೊಂಡಿದೆ ಎನ್ನುವ ಮಾತುಗಳು ಭಕ್ತರಿಂದಲೇ ಕೇಳಿ ಬಂದಿವೆ.
ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಹಿರಿಯ-ಕಿರಿಯ ಅರ್ಚಕರು ಹಾಗೂ ಉತ್ಸವ ಸಮಿತಿ ಸದಸ್ಯರ ನಡುವೆ ನಡೆಯುತ್ತಿರುವ ಶೀತಲ ಸಮರವು ಈಗ ಬಹಿರಂಗಗೊಂಡಿದೆ.

ದಾಸೋಹ ನಿಲಯದ ಅಶುಚಿತ್ವ ಪಾತ್ರೆಗಳ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ವಿಷ ಪ್ರಸಾದ ಸೇವನೆ ಪ್ರಕರಣ ಘಟನೆಯಿಂದ ಎಚ್ಚೆತ್ತಿರುವ ತಾಲ್ಲೂಕಿನ ಅಧಿಕಾರಿಗಳು ಅನ್ನ ಸಂತರ್ಪಣೆ ಕಾರ್ಯಕ್ಕೆ ಮತ್ತೊಮ್ಮೆ ಅವಕಾಶ ಕಲ್ಪಿಸಿದರೆ ಎದುರಾಗಬಹುದಾದ ಸಂಭವನೀಯ ಅಪಾಯ ಮನಗಂಡು ಅನುಮತಿ ನಿರಾಕರಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ವೈಕುಂಠ ಏಕಾದಶಿ ದಿನದಂದು ಶ್ರೀ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಪ್ರಸಾದವನ್ನು ಪರೀಕ್ಷಿಸಿದ ನಂತರವೇ ಭಕ್ತರಿಗೆ ನೀಡಿದ್ದನ್ನು ಸ್ಮರಿಸಬಹುದು.

ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಐತಿಹಾಸಿಕ ದೇಗುಲದ ಸುತ್ತ ಸ್ವಚ್ಛತೆ ಕಾಪಾಡಲು ದೇಗುಲಕ್ಕೆ ಸಮೀಪವಿರುವ ಸುಂದರ ಕಲ್ಯಾಣಿ ಸಂಪೂರ್ಣ ಕಲುಷಿತಗೊಂಡಿದ್ದು, ದೇವರಿಗೆ ಮುಡಿ ನೀಡಲು ಬರುವ ಭಕ್ತರಿಗೆ ಸ್ನಾನಕ್ಕೆ ನೀರಿನ ಅಭಾವ ಉಂಟಾಗುತ್ತಿದೆ. ಶೌಚಾಲಯಗಳ ಕೊರತೆಯಿಂದಾಗಿ ಇಡೀ ಪ್ರದೇಶ ಗಬ್ಬು ನಾರುತ್ತಿದ್ದು ಭಕ್ತರು ಮೂಗು ಮುಚ್ಚಿಕೊಂಡು ತಿರುಗಬೇಕಾಗಿದೆ.

Leave a Comment