ಮಾರ್ಚ್ 3 ರಿಂದ ಬೃಹತ್ ಉದ್ಯೋಗ ಮೇಳ-ಸಂತೋಷ್ ಲಾಡ್

ಬಳ್ಳಾರಿ, ಫೆ.17:ಜಿಲ್ಲೆಯ ತೋರಣಗಲ್ಲು ಬಳಿ ಇರುವ ಜಿಂದಾಲ್ ವಿಜಯನಗರ ಟೌನ್ ಷಿಪ್ ನ ವಿದ್ಯಾನಗರದಲ್ಲಿ ಬರುವ ಮಾರ್ಚ್ ತಿಂಗಳ 3 ರಿಂದ 5ರ ವರೆಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯದ ಕಾರ್ಮಿಕ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಬಳ್ಳಾರಿಯ ಸರ್ಕಾರಿ ಅತಿಥಿ ಗೃಹದಲ್ಲಿಂದು ಮಧ್ಯಾಹ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಎಂಪಿಟಿ ಸಂಸ್ಥೆಯ ಸಹಕಾರಗಳೊಂದಿಗೆ ಈ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. 60ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದರು.

60ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗವಹಿಸಲಿರುವ, ಭಾರತ ಸರ್ಕಾರದ ‘ನೀಮ್’ ಕಾರ್ಯಕ್ರಮದ ಅಡಿಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ 10 ರಿಂದ 15 ಸಾವಿರ ಜನ ನಿರುದ್ಯೋಗಿ ಯುವಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ರಾಜ್ಯ ಸರ್ಕಾರದ ಉದ್ಯೋಗ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಆಡಳಿತ ಹಾಗೂ ಎಂ.ಪಿ.ಟಿ ಸಂಸ್ಥೆಯು ಜಂಟಿಯಾಗಿ ಇದನ್ನು ಹಮ್ಮಿಕೊಂಡಿದ್ದು, ಈ ಭಾಗದ ಯುವಜನತೆಗೆ ಇದು ಉಪಯುಕ್ತವಾಗಲಿದೆ ಎಂದರು.

ಉದ್ಯೋಗ ಮೇಳಗಳು ಹೆಸರಿಗಷ್ಟೇ ನಡೆಯದೇ ನಿಜವಾಗಿಯೂ ನಿರುದ್ಯೋಗಿಗಳ ಬದುಕಿಗೆ ದಾರಿಯಾಗಬಲ್ಲ, ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತಹ ಮೇಳವಾಗಬೇಕು ಎನ್ನುವ ಸದುದ್ದೇಶದೊಂದಿಗೆ ಇದನ್ನು ನಡೆಸಲಾಗುತ್ತಿದೆ, ಅಭ್ಯರ್ಥಿಗಳ ವಿವರ (ಬಯೋಡೇಟ) ಪಡೆದು ಅವರನ್ನು ಸಂದರ್ಶಿಸಿದ ನಂತರ ಆಯ್ಕೆಯಾದರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿದ್ದಾರೆ. ಅಂದಾಜು 4 ರಿಂದ 5 ಸಾವರ ಜನರಿಗೆ ಉದ್ಯೋಗಾವಕಾಶಗಳ ಲಭವಾಗಬಹುದೆಂದೂ ನಿರೀಕ್ಷೆ ಹೊಂದಿದ್ದೇವೆ ಎಂದು ಸಂತೋಷ್ ಲಾಡ್ ವಿಶ್ವಾಸದಿಂದ ನುಡಿದರು.

ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳ
ಕರ್ನಾಟಕವು ವಿವಿಧ ಉದ್ಯಮಿಗಳಿಗೆ ಬಂಡವಾಳ ಹೂಡಲು, ಕಾರ್ಖಾನೆಗಳನ್ನು, ಉದ್ಯಮಿಗಳನ್ನು ಸ್ಥಾಪಿಸಲು ಪ್ರಶಸ್ತವಾದ ಸ್ಥಳವಾಗಿದೆ. ಬಂಡವಾಳ ಸ್ನೇಹಿ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಇಲ್ಲಿ ಉದ್ಯಮಗಳ ಸ್ಥಾಪನೆಗೆ ಪೂರಕವಾದ ವಾತಾವರಣವಿದೆ ಈಗಾಗಲೇ ಒಂದೂವರೆ ಲಕ್ಷ ಕೋಟಿ ರೂಗಳ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ ಉದ್ಯಮ ಸ್ನೇಹ ವಾತಾವರಣವಿದೆ ಎಂದರು.

ಅಸಂಘಟಿತ ಕಾರ್ಮಿಕರಿಗೆ ನೆರವು
ರಾಜ್ಯದಲ್ಲಿನ ಅಂದಾಜು ಎರಡು ಕೋಟಿ ಅಸಂಘಟಿತ ಕಾರ್ಮಿಕರನ್ನು ಭವಿಷ್ಯನಿಧಿ ಯೋಜನೆಯಡಿ ತರಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 2,400 ಕೋಟಿ ರೂಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಗೆ ಒಪ್ಪಿಗೆ ದೊರೆತ ಕೂಡಲೇ ಜಾರಿಗೆ ತರಲಾಗುತ್ತಿದೆ. ಕಾರ್ಮಿಕರು ಪ್ರತಿ ತಿಂಗಳು ನೂರು ರೂಗಳಂತೆ ವರ್ಷಕ್ಕೆ 1,200 ರೂಗಳು ತುಂಬಿದಲ್ಲಿ ಸರ್ಕಾರವೂ ಕೂಡಾ ತನ್ನ ಪಾಲಿನ ಹಣವನ್ನು ತುಂಬುತ್ತದೆ. ಇದು ಕಾರ್ಮಿಕರಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದು ಸಂತೋಷ್ ಲಾಡ್ ತಿಳಿಸಿದರು.

ರಾಜ್ಯದಲ್ಲಿನ ಹಮಾಲಿ ಕಾರ್ಮಿಕರಿಗೆ, ಹಾಗೂ ಮನೆ ಗೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಪಿಎಫ್ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಿಕೆಯ ಬಗ್ಗೆಯೂ ಚಿಂತಿಸಲಾಗಿದೆ, ಅಂದಾಜು 11 ಲಕ್ಷ ಜನ ಕಾರ್ಮಿಕರಿಗೆ ಈ ಸೌಲಭ್ಯ ನೀಡಲು ಚಿಂತಿಸಿದ್ದೇವೆ ಎಂದರು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ತಮಿಳುನಾಡು ರಾಜ್ಯದಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನಲ್ಲಿ ಮೂಗು ತೂರಿಸಿ, ಪರಿಸ್ಥಿತಿಯ ಲಾಭ ಪಡೆಯಲು ಹುನ್ನಾರ ನಡೆಸಿದೆ, ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರುವ ಪ್ರಯತ್ನ ನಡೆಸಿದೆ. ಆದರೆ ಕೇಂದ್ರದಲ್ಲಿ ಯುಪಿಎ ಆಡಳಿತವಿದ್ದು, ಈ ರೀತಿ ಯಾವುದೇ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನ ನಡೆಸಿಲ್ಲ ಎಂದು ತಿಳಿಸಿದರು.

Leave a Comment