ಮಾರ್ಗಸೂಚಿ ಉಲ್ಲಂಘನೆ ಸೋಂಕಿತರ ಸಂಖ್ಯೆ ಹೆಚ್ಚಳ

ಬೆಂಗಳೂರು, ಏ. ೬- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವುದು ಆಘಾತಕಾರಿ ಅಂಶವಾಗಿದೆ. ಇದರ ನಡುವೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ”ರಕ್ತಬೀಜಾಸುರ” ನಂತೆ ಹರಡಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಲಾಕ್ ಡೌನ್ ಜಾರಿಯಾಗಿ 13ನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಸಹ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗಿವೆ.

ಬೆಂಗಳೂರು ಮಹಾನಗರ ಸೇರಿದಂತೆ, ರಾಜ್ಯದ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳು ಹೆಚ್ಚಾಗಿವೆ. ಹಣ್ಣು, ತರಕಾರಿ, ದಿನಸಿ, ವಸ್ತುಗಳ ಖರೀದಿ ನೆಪದಲ್ಲಿ ಜನರು ಗುಂಪುಗುಂಪಾಗಿ ಸೇರುತ್ತಿರುವುದು ಸೋಂಕು ಹರಡಲು ಕಾರಣವಾಗಿದೆ.

ಈ ರೀತಿ ಸೇರಿದ ಜನರು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ, ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬೀಳುತ್ತಿರುವ ದೃಶ್ಯಗಳನ್ನು ಎಲ್ಲೆಡೆ ಕಾಣಬಹುದಾಗಿದೆ.

ಬೆಳಗಿನ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಆಯಾಜಿಲ್ಲಾಧಿಕಾರಿಗಳು ಅನುವು ಮಾಡಿಕೊಟ್ಟಿರುವುದನ್ನು ಸಾರ್ವಜನಿಕರು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸೋಂಕು ಹರಡಲು ಅವಕಾಶ ಕಲ್ಪಿಸುತ್ತಿದ್ದಾರೆ.

ಪೊಲೀಸರು ಈ ರೀತಿಯ ಗುಂಪುಗಳನ್ನು ಕಂಡಕೂಡಲೇ ಸ್ಥಳಕ್ಕೆ ಧಾವಿಸಿ, ಗುಂಪು ಚದುರಿಸಲು ಲಾಠಿಪ್ರಹಾರ ಮಾಡುತ್ತಿದ್ದರೂ, ಜನಕ್ಕೆ ಬುದ್ಧಿಬಂದಂತಿಲ್ಲ. ನಾಯಿ ಬಾಲ ಡೊಂಕು ಎಂಬಂತೆ, ಪೊಲೀಸರು ಸ್ಥಳ ಖಾಲಿ ಮಾಡಿದ ಕೂಡಲೇ ಮತ್ತೆ ಜನರು ಗುಂಪಾಗಿ ಸೇರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ವರದಿಯಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 151ಕ್ಕೆ ಏರಿದ್ದು, ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಬೆಳಗಾವಿಗೆ ವಾಪಸಾದ ಮೂವರು ಮಹಿಳೆಯರಲ್ಲಿ ಸೋಂಕಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿರುವುದು ಗಂಡಾಂತರ ಹೆಚ್ಚಾಗುವ ಮುನ್ಸೂಚನೆ ನೀಡಿದೆ.

ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಾಪಸ್ಸಾಗಿರುವ ಜನರು, ಮುಸ್ಲಿಂ ಸಮುದಾಯದವರ ಮನೆಗಳಲ್ಲಿ “”ಅತಿಥಿ”” ಗಳಾಗಿ ಆಶ್ರಯ ಪಡೆದಿದ್ದು, ಅವರ ಗುಟ್ಟನ್ನು ಬಿಟ್ಟುಕೊಡಲು ಜನರು ಹಿಂಜರಿಯುತ್ತಿರುವುದು ಸೋಂಕು ಹರಡಲಿಕ್ಕೆ ಮತ್ತೊಂದು ಕಾರಣವಾಗಿದೆ.

ವಿದೇಶಿಯರು ಸೇರಿದಂತೆ, ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಧರ್ಮ ಪ್ರಚಾರದ ಶಿಬಿರಗಳನ್ನು ಏರ್ಪಡಿಸಲೆಂದೇ ವಿವಿಧ ರಾಜ್ಯಗಳಿಗೆ ಚದುರಿಹೋಗಿರುವ ಭಾಗವಾಗಿ ಕರ್ನಾಟಕಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು, ಆ ನಂತರ, ಅವರ ಸಂಪರ್ಕಕ್ಕೆ ದೊರೆತವರು ಬಂಧು – ಬಳಗದವರು, ಎಲ್ಲೆಲ್ಲಿ ಓ‌ಡಾಡುತ್ತಾರೋ ಅಂತಹ ಕಡೆಗಳಲ್ಲೆಲ್ಲಾ ಸೋಂಕು ”ರಕ್ತಬೀಜಾಸುರ”ನಂತೆ ಹರಡಲಾರಂಭಿಸಿದೆ.

ವಿದೇಶಿಯರು ಮತ್ತು ಧರ್ಮ ಪ್ರಚಾರಕರಿಗೆ ಆಶ್ರಯ ನೀಡಿದವರು ಇನ್ನಾದರೂ ಎಚ್ಚೆತ್ತುಕೊಂಡು ಜಿಲ್ಲಾಡಳಿತಗಳಿಗೆ ಮಾಹಿತಿ ನೀಡದಿದ್ದಲ್ಲಿ, ಅವರ ಕುಟುಂಬಗಳಿಗೆ ಕಂಟಕ ಎಂಬುದನ್ನು ಮರೆಯಬಾರದು ಎಂದು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 57ಕ್ಕೇರಿದ್ದು, ಮೈಸೂರಿನಲ್ಲಿ 28, ದಕ್ಷಿಣ ಕನ್ನಡ – 12, ಬೀದರ್ – 10, ಉತ್ತರ ಕನ್ನಡ – 8, ಚಿಕ್ಕಬಳ್ಳಾಪುರ – 7, ಬೆಳಗಾವಿ – 7, ಬಳ್ಳಾರಿ – 6, ಕಲಬುರಗಿ – 5, ದಾವಣಗೆರೆ – ಉಡುಪಿ – ತಲಾ 3, ತುಮಕೂರು, ಕೊಡಗು, ಧಾರವಾಡ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.

Leave a Comment