ಮಾಯೆ-ವಾಸ್ತವದ ಜಾದು ಕನವರಿಸುತ್ತಾ…

ಅಜಾಗೃತ ಮನಸ್ಸಿನ ಪವಾಡ ಶಕ್ತಿಯನ್ನು ಹೊರ ತಂದು ‘ಮೋಜೊ’ ಚಿತ್ರ ಮಾಡಿದ್ದಾರಂತೆ ನಿರ್ದೇಶಕ ಶ್ರೀಶ. ಈ ವಿವರವೇ ವಿಭಿನ್ನ ಎನಿಸುತ್ತದೆ. ಅವರು ಹೆಣೆದಿರುವ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆಗೆ ಸಿಕ್ಸ್ತ್‌ಸೆನ್ಸ್‌ನ ಆಧಾರವಾಗಿಟ್ಟುಕೊಂಡಿದ್ದಾರೆ. ‘ಮೋಜೋ’ ಎನ್ನುವುದು ಆಫ್ರಿಕಾ ದೇಶದ ಕ್ರಿಯೋಲ್ ಭಾಷೆಯ ಪದ ಇದಕ್ಕೆ ಕನ್ನಡದಲ್ಲಿ ಜಾದು ಎನ್ನುವ ಅರ್ಥವಿದೆಯಂತೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತದ ಮೋಜು ಪದಗಳು ಅದೇ ಮೋಜೊದಿಂದ ಬಂದಿರುವುದಾಗಿದೆ ಎನ್ನುತ್ತಾರೆ. ಇಲ್ಲಿ ಅವರು ಬಳಸಿರುವ ‘ಮೋಜೊ’ ಶೀರ್ಷಿಕೆಗೆ ಮಾಯೆ-ವಾಸ್ತವ ನಡುವಿನ ಹೋರಾಟ ಎನ್ನುವ ಅಡಿಬರಹವಿದೆ.
ಚಿತ್ರದ ನಾಯಕನಲ್ಲಿ ಸಿಕ್ಸ್ತ್‌ಸೆನ್ಸ್ ಉಂಟಾದಾಗ ಅವನಿಗೆ ಮತ್ತು ಕೊಲೆಯೊಂದಕ್ಕೆ ಸಂಬಂಧವಿರುವುದು ತೆರೆದುಕೊಳ್ಳುತ್ತದೆ. ಇದು ಕಥೆಯ ಜಾಡು. ಶ್ರೀಶ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರೂ ಇದು ಅವರಿಗೆ ಮೊದಲ ಸಿನೆಮಾ. ಬಹುತೇಕ ಹೊಸಬರನ್ನೇ ಅದೂ ರಂಗಭೂಮಿ ಕಲಾವಿದರನ್ನೇ ಇಟ್ಟುಕೊಂಡು ‘ಮೋಜೊ’ ಮಾಡಿದ್ದಾರೆ. ನಾಯಕ ಮನು ಮೂಲತಃ ಹಾಸನದವರು ಇಂಜೀನಿಯರಿಂಗ್ ಓದಿಕೊಂಡಿದ್ದಾರೆ ಇದಕ್ಕೆ ಮೊದಲು ‘ಕಾ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಿದೆ. ಆಡಿಷನ್ ಮೂಲಕ ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದು ತನ್ನ ಅದೃಷ್ಟ ಎಂದು ಭಾವಿಸಿದ್ದಾರೆ. ನಾಯಕಿ ಅನುಷ ಇಂಜೀನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾಟಕದಂತೆ ಈ ಸಿನೆಮಾಕ್ಕೂ ರಿಹರ್ಸ್‌ಲ್ ನಡೆಸಿ ೨೫ ದಿನದೊಳಗೆ ಹಗಲು-ರಾತ್ರಿ ಚಿತ್ರೀಕರಿಸಿ ಪಕ್ಕಾ ಯೋಜನೆಯಂತೆ ಪೂರ್ಣಗೊಳಸಲಾದ ಈ ಚಿತ್ರ ಸಿಕ್ಕಿದ್ದು ತನ್ನ ಅದೃಷ್ಟ ಎಂದರೆ, ಸ್ಮಿತಾ ಕುಲಕರ್ಣಿ ಮೂಲತಃ ಬೆಳಗಾವಿಯವರಾಗಿದ್ದು, ಉತ್ತರ ಕರ್ನಾಟಕದ ಛಾಯೆ ಇರುವ ಪಾತ್ರದಲ್ಲಿ ಕಾಣಿಸಿಕೊಂಡ ಖುಷಿಯಲ್ಲಿದ್ದರು. ಅವರಿಗೆ ಅನಂತ್‌ನಾಗ ಅವರ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಚಿತ್ರ ನಿರ್ದೇಶಕರೂ ಆದ ಲಾಸ್ಟ್‌ಬಸ್ ಅರವಿಂದ್ ಪ್ರಕಾರ ‘ಮೋಜೊ’ ವಿಭಿನ್ನ ಜಾನರ್‌ನ ಚಿತ್ರವಾಗಿದ್ದು, ಕನ್ನಡ ಚಿತ್ರರಂಗಕ್ಕೇ ಸಕಾರಾತ್ಮಕ ಪ್ರಗತಿಯ ಚಿತ್ರ ಎನಿಸಲಿದೆಯಂತೆ. ಚಿತ್ರದ ಟ್ರೇಲರ್‌ನ ಬಿಡುಗಡೆ ಮಾಡಿರುವ ಚಿತ್ರತಂಡ ಹೊಸ ಬಗೆಯ ಚಿತ್ರ ಮಾಡಿರುವ ಉತ್ಸಾಹದಲ್ಲಿದೆ.

Leave a Comment