ಮಾಯಾವತಿಗೆ ಚುನಾವಣಾ ಆಯೋಗ ನಿರ್ಬಂಧ: ಮಧ್ಯಸ್ಥಿಕೆ ವಹಿಸಲು ಸುಪ್ರೀಂ ನಕಾರ

ನವದೆಹಲಿ, ಏ 16 -ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ವಿಧಿಸಿರುವ ನಿರ್ಬಂಧ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಮೂಲಕ ಮಾಯಾವತಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಜಾತಿ, ಧರ್ಮದ ಹೆಸರಿನಲ್ಲಿ ವೈಷಮ್ಯ ಹರಡುವ ನಾಯಕರು ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ನಡೆಸುವ ವೇಳೆ, ಚುನಾವಣಾ ಆಯೋಗ ವಿಧಿಸಿದ ನಿರ್ಬಂಧ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು ಎಂದು ಮಾಯಾವತಿ ಮನವಿ ಮಾಡಿದ್ದರು.

ಮಾಯಾವತಿ ಪರ ವಾದ ಮಂಡಿಸಿದ ವಕೀಲ ದುಷ್ಯಂತ್ ದವೆ, ತಮ್ಮ ಕಕ್ಷಿದಾರರ ಮೇಲೆ ಆಯೋಗ ಹೇರಿದ್ದ ನಿರ್ಬಂಧ ತುಂಬ ಕಠೋರವಾಗಿದ್ದು, ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ತಕ್ಷಣವೇ ಮಧ‍್ಯಸ್ಥಿಕೆ ವಹಿಸಿ ನ್ಯಾಯ ಒದಗಿಸಬೇಕು ಎಂದು ವಾದ ಮಂಡಿಸಿ ಮನವಿ ಮಾಡಿದ್ದರು.

ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರ ನೇತೃತ್ವದ ಪೀಠ, ಮಾಯಾವತಿ ಅವರ ವಕೀಲರು ನೀಡಿದ ಕಾರಣಗಳು ಸಮಂಜಸಕರ ಅಲ್ಲ. ಹೀಗಾಗಿ ಪ್ರತಿಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಮತ್ತೊಂದು ಅರ್ಜಿ ಸಲ್ಲಿಸಲು ನಿರ್ದೇಶಿಸಿದೆ.

ದ್ವೇಷ ಹರಡುವ ಭಾಷಣ ಮಾಡಿದ ಮಾಯಾವತಿ ಪ್ರಚಾರಕ್ಕೆ ಚುನಾವಣಾ ಆಯೋಗ 48 ಗಂಟೆಗಳ ಕಾಲ ನಿರ್ಬಂಧ ಹೇರಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಚಾರಕ್ಕೆ 72 ಗಂಟೆಗಳ ತಡೆ ನೀಡಿದೆ.

 

Leave a Comment