ಮಾಮ ಮತ್ತು ಸುದೀಪ್

ಸುದೀಪ್ ಕನ್ನಡ ಚಿತ್ರರಂಗದ ಧೀ ಶಕ್ತಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು ಆವರು ಹೊಗಳಿದರು. ಜೊತೆಗೆ ಸುದೀಪ್‌ಗೆ ಸಿನೆಮಾ ಮಾಡೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸುದೀಪ್ ನಿರ್ಮಾಪಕರ ನಟ, ಸಂಭಾವನೆ ತೆಗೆದುಕೊಳ್ಳದೆ ಕಷ್ಟದಲ್ಲಿದ್ದ ನಿರ್ಮಾಪಕರಿಂದ ಸಿನೆಮಾ ಬಿಡುಗಡೆಮಾಡಿಸಿದ್ದಾರೆ. ಅವರಿಗೆ ನಂದಿ ಪ್ರಶಸ್ತಿ ಸಿಕ್ಕಿದೆ ಎಂದರೆ ಅದು ಕನ್ನಡಿಗರ ಹೆಮ್ಮೆ ಎಂದೂ ಬಣ್ಣಿಸಿದರು. ಇದಕ್ಕೆ ವೇದಿಕೆಯಾಗಿತ್ತು ಅವರ ಮಗ ಅನೂಪ್ ಸಾ.ರಾ. ಗೋವಿಂದು ಅವರ ಸಾಗುವ ಹಾದಿಯಲ್ಲಿ ಹೊಸ ಚಿತ್ರದ ಟೀಜರ್ ಬಿಡುಗಡೆ ಸಮಾರಂಭ.

ಮಗ ಮತ್ತು ಚಿತ್ರದ ನಿರ್ದೇಶಕ ಶಿವಕುಮಾರ್ ಗೌಡ ಸುದೀಪ್ ಅವರೇ ಟೀಜರ್ ಬಿಡುಗಡೆ ಮಾಡಬೇಕೆಂದು ಬಯಸಿದ್ದರಿಂದ ಕರೆಸಿದ್ದಾಗಿಯೂ ಗೋವಿಂದು ಹೇಳಿದ್ದರು. ಆದರೆ ಅದು ಸುದೀಪ್ ಅವರನ್ನು ಹೊಗಳುವ ವೇದಿಕೆಯೂ ಆಯಿತು. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸುದೀಪ್ ಅವ್ರು ಖಾವಿಯನ್ನು ಧರಿಸಿಲ್ಲ ಆದರೆ ಖಾವಿಯ ಗುಣಗಳೆಲ್ಲವೂ ಅವರಲ್ಲಿದೆ ಎಂದರೆ, ಹೊಸ ನಿರ್ದೇಶಕ ಶಿವಕುಮಾರ್ ಗೌಡ ಕನ್ನಡ ಚಿತ್ರರಂಗದ ಇತಿಹಾಸ ನಡೆದುಬಂದ ದಾರಿಯಲ್ಲಿ ಕಿರುಹೆಜ್ಜೆಯೂರಲು ಸಾಗುವ ದಾರಿಯಲ್ಲಿ ಶುರುವಿಟ್ಟಿರುವುದಾಗಿ ಹೇಳಿ ಚಿತ್ರದ ಕುರಿತಾದ ತಮ್ಮ ಕನಸಿಗೆ ಮಾತಿನ ರೂಪ ಕೊಟ್ಟರು.

ಸುದೀಪ್ ಅವರಿಗೆ ಹೃತ್ಪೂರ್ವಕ ವಂದನೆ ತಿಳಿಸಿ ಋಣಿಯಾಗಿರುವುದಾಗಿ ಹೇಳಿದ ಅನೂಪ್‌ಗೆ ಸುದೀಪ್ ಸಮಾರಂಭಕ್ಕೆ ಬಂದಿದ್ದೇ ಧನ್ಯತೆಯ ಭಾವ ಮೂಡಿಸಿತ್ತು. ಚಿತ್ರದಲ್ಲಿ ಲವ್‌ಸ್ಟೋರಿಗೂ ಮಿಗಿಲಾಗಿ ಸಮಾಜಕ್ಕೆ ಒಂದು ಉತ್ತಮ ಸಂದೇಶವಿದೆ ಎಂದ ಅವರ ಬಹುಪಾಲು ಮಾತು ಸುದೀಪ್ ಅವರನ್ನು ಹೊಗಳುವುದಕ್ಕೆ ಮೀಸಲಾಯಿತು. ಇದರ ನಡುವೆ ಅನೂಪ್ ಸುದೀಪ್ ಅವರನ್ನು ಸುದೀಪ್ ಮಾಮ ಎಂದಿದ್ದು ಮಾತ್ರ ಸುದೀಪ್‌ಗೆ ನೆನಪಿನ ಹಾಯಿ ದೋಣಿ ಮೀಟುವಂತೆ ಮಾಡಿತು ಅವರ ಮಾತುಗಳ ಹರಿಯಿತು ಹೀಗೆ “ಅನೂಪ್ ಮಾತಾಡ್ತಾ ದಿಡೀರ್ ಅಂತ ಸುದೀಪ್ ‘ಮಾಮ’ನೇ ಟೀಜರ್ ಬಿಡುಗಡೆ ಮಾಡ್ಬೇಕು ಅನ್ನೋದಿತ್ತು ಅಂದ್ಬಿಟ್ರು.

ಇದು ನಿನ್ನ(ಅನೂಪ್) ತಪ್ಪಲ್ಲ ನನ್ನದು, ಯಾವಾಗ ಇಷ್ಟು ಬೇಗ ಮಾವ ಆಗ್ಹೋದೆ ನಾನು? ‘ಮಾಮ’ ಅನ್ನೋದನ್ನು ದಯವಿಟ್ಟು ಒಳ್ಳೆ ರೀತಿಯಲ್ಲಿ ತೆಗೆದುಕೊಳ್ಳಿ. ಒಂದು ಖುಷಿ ಆಯ್ತು ನೀವೆಲ್ಲಾ (ಅನೂಪ್‌ಗೆ) ಬೆಳೆದ್ಬಿಟ್ರಿ ಆದ್ರೆ ನನ್ಗೆ ವಯಸ್ಸು ಹಾಗೆ ಇದೇಂತ ಅನ್ನಿಸ್ತಿದೆ. ಈ ವೇದಿಕೆ ಮೇಲೆ, ಚಿತ್ರರಂಗದ ತುಂಬಾ ಹಳಬ ನಾನು ಅಂತ ಅನ್ನಿಸ್ತಿಲ್ಲ. ಚಿತ್ರರಂಗದಲಿ ಏನೋ ಮಾಡಿದ್ದೇವೆ ಅಂತನೂ ಅನ್ನಿಸ್ತಿಲ್ಲ. ಯಾಕೇಂದ್ರೆ ಇದೇ ವೇದಿಕೆಯಲ್ಲಿ(ರೇಣುಕಾಂಬ ಸ್ಟುಡಿಯೋ) ಇದೇ ಕಾರಿಡಾರ್‌ನಲ್ಲಿ ತುಂಬಾ ಪ್ರೀತಿ ಇಟ್ಕೊಂಡ ಅನೇಕ ನಾಯಕ ನಟರಿಗಾಗಿ ಕಾದಿದ್ದೇವೆ.

ಹೀಗಾಗಿ ಅನೂಪ್ ನೀವು ಏನು ಹೇಳ್ತಿದ್ದೀರ ಅನ್ನೋದು ನನ್ಗೆ ಅರ್ಥವಾಗುತ್ತೆ. ನಾನು ಸಿನೆಮಾದ ಟೀಜರ್ ಲಾಂಚ್ ಮಾಡ್ತೀರೋದು ಉಪಕಾರನೂ ಅಲ್ಲ ದೊಡ್ಡತನಾನೂ ಅಲ್ಲ ಈಗ ನಾನು ಮನೆಯಲ್ಲಿದ್ದೇನೆ ನೀವು ಕೆಲಸಕೊಟ್ಟರೆ ಬಂದು ಮಾಡ್ತೀನಿ(ತಮಾಷೆಯಾಗಿ).ಆಗೆಲ್ಲಾ ನನ್ನ ಸಿನೆಮಾಗಳು ರಿಲೀಸ್ ಆದಾಗ ಶಿವಣ್ಣ ಅವ್ರಿಗೆ, ಅಂಬರೀಷ್ ಅಣ್ಣನಿಗೆ, ವಿಷ್ಣು ಸರ್‌ಗೆ, ಡಾ. ರಾಜ್ ಕುಮಾರ್ ಅವ್ರಿಗೂ ಕಾದಿದ್ದೇವೆ. ಅವ್ರು (ಡಾ.ರಾಜ್‌ಕುಮಾರ್) ಬಾದಾಮಿ ಹೌಸ್‌ನಲ್ಲಿ ನನ್ನ ಎರಡು ಸಿನೆಮಾ ನೋಡಿದ್ದಾರೆ. ಇದು (ರೇಣುಕಾಂಬ ಸ್ಟುಡಿಯೋ) ಪುಟ್ಟ ವೇದಿಕೆ ಆದ್ರೂ ಕೂಡ ಮಹಾನ್ ವೇದಿಕೆ ಯಾಕಂದ್ರೆ ಬಹಳ ಸಿನೆಮಾಗಳ ಪ್ರೊಜೆಕ್ಷನ್ ಇಲ್ಲಿ ನಡೆದಿದೆ.

ಇಲ್ಲಿ ಬಹಳ ಸಿನೆಮಾಗಳು ವ್ಯಾಪಾರ ಆಗಿವೆ ಬಹಳ ಜನ ಗೆದ್ದಿದ್ದಾರೆ ಬಹಳ ಜನ  ಮಲಗಿದ್ದಾರೆ ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದ ಒಂದು ಮೂಲೆಯಲ್ಲಿರುವ ಈ ವೇದಿಕೆ(ರೇಣುಕಾಂಬ ಸ್ಟುಡಿಯೋ) ಪರದೆ ಬಹಳ ಮೌನವಾಗಿದೆ ಆದರೆ ಚಿತ್ರರಂಗನ ತುಂಬಾ ನೋಡ್ಬಿಟ್ಟಿದೆ ಅದರಲ್ಲಿ ನಾನೂ ಒಬ್ಬ. ಅನೂಪ್ ನೀವು ಹೇಳಿದ ಮಾಮ ಅನ್ನೋ ಪದ ಇದನೆಲ್ಲಾ ನೆನಪಿಸಿಕೊಳ್ಳೊ ಹಾಗೆ ಮಾಡ್ತು ಅಲ್ಲಿವರೆಗೂ ನಾನು ಅತಿಥಿಯಾಗಿಯೇ ಕುಳಿತಿದ್ದೆ.

ಅಲ್ಲಿಂದ ನನ್ನ ಕೆಳಗೆ ಎಳ್ಕೋಂಡ್ ಬಂದ್ಬಿಟ್ರಿ. ನನ್ನ ತುಂಬಾನೇ ಗೌರವಿಸಿದ್ದೀರ ನನ್ನ ಹೋಗಳಿದ್ದಕ್ಕಿಂತ ಹೆಚ್ಚಾಗಿ ನಿಮ್ಮಗಳ ಹೃದಯದಲ್ಲಿ ಒಂದು ಸ್ಥಾನ ಕೊಟ್ಟಿದ್ದೀರ. ಇವತ್ತು ನಾನು ಈ ವೇದಿಕೆಯಲ್ಲಿ ನಿಂತಿದ್ದೇನೆ ಎಂದರೆ ನನ್ನ ಸಾಧನೆಗಿಂತ ನೀವು ತೋರಿಸ್ತಿರೋ ಪ್ರೀತಿ ಅದು. ನನ್ಗೆ ಪ್ರಶಸ್ತಿ ಸಿಕ್ಕಿದೇಂತ ಅದೇನೋ ಹೇಳಿದ್ರಲ್ಲ ಆ ಪ್ರಶಸ್ತಿಗಿಂತ ದೊಡ್ಡದಿದು.

ಪ್ರಶಸ್ತಿಗೆ ನಾನು ಬೆಲೆಕೊಡೋಲ್ಲ ಅಂತ ಹೇಳೋದಿಲ್ಲ ಆದ್ರೆ ಹದಿನೈದಿಪ್ಪತ್ತು ವರ್ಷಗಳಿಂದ ಪ್ರಶಸ್ತಿ ಸ್ವೀಕರಿಸಲು ಸಮಾರಂಭಕ್ಕೆ ನಾನು ಹೋಗಿಲ್ಲ. ಹಾಗಂತ ಪ್ರಶಸ್ತಿಯಿಂದ ನನ್ಗೆ ನೋವಾಗಿದೇಂತ ಅಲ. ಆದರೆ ದೂರ ಇರೋದರಿಂದ ಬಹಳ ಖುಷಿ ಕೊಟ್ಟಿದೆ, ನನ್ನ ಸ್ವಾರ್ಥ ಸತ್ಹೋಗಿದೆ ಸಿನೆಮಾ ಮಾಡ್ತೀನಷ್ಟೇ ಇವಾಗ.

ಸಾ.ರಾ. ಗೋವಿಂದು ಅವ್ರು ಚಿತ್ರರಂಗದ ಬಹಳ ಏರುಪೇರುಗಳನ್ನು ನೋಡಿದವರು ಅವ್ರಿಂದ ಹೋಗಳಿಸಿಕೊಳ್ತಿದ್ದೀನಿ, ಕಿರಿಯರು ನನ್ನ ಬಗ್ಗೆ ಖುಷಿಯಾಗಿ ಮಾತಾಡ್ತೀರ ಅಂದ್ರೆ ತುಂಬಾನೇ ಧನ್ಯವಾದಗಳು.

ಬಹಳ ವಿಚಿತ್ರ ಸಂದರ್ಭದಲ್ಲಿ ನಾನು ಒಬ್ಬನೇ ಕುಳಿತಿರಬೇಕಾದ್ರೆ ನನ್ನ ಪರವಾಗಿ ದ್ವನಿ ಎತ್ತಿದ ಏಕೈಕ ವ್ಯಕ್ತಿ ಚಂದ್ರಶೇಖರ್ ಅವರಾಗಿದ್ದರು. ಅದನ್ನು ನಾನು ಮರೆತಿಲ್ಲ ಮರೆಯೋದು ಇಲ್ಲ ಎಂದು ನೆನಪಿನ ಭಾವನೆಗಳ ಅಲೆಯಿಂದ ಹೊರಬಂದ ಅವರು, ಮನಸು ಮುಗ್ದವಾಗಿದ್ದಾಗ ಮಾತ್ರ  ಸಾಗುವದಾರಿಯಲ್ಲಿ ಚಿತ್ರದ ಟೀಜರ್ ನಂತಹದ್ದು ಮಾಡಲು ಸಾಧ್ಯವಾಗುತ್ತದೆ ಎಂದು ಮೆಚ್ಚಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Leave a Comment