ಮಾನ್ವಿ : ಒಂದೇ ರಾತ್ರಿ 2 ಮನೆ, ದೇವಸ್ಥಾನಕ್ಕೆ ಕನ್ನ

 18 ತೊಲೆ ಚಿನ್ನ, ಬೆಳ್ಳಿ ಮೂರ್ತಿ, 6 ಲಕ್ಷ ನಗದು ಕಳುವು
ಮಾನ್ವಿ.ಜ.11- ಸರಣಿ ಕಳುವಿನಿಂದ ಬೆಚ್ಚಿಬಿದ್ದ ನಗರ ಪ್ರದೇಶದ ನಿವಾಸಿಗಳ ಪಾಡು ಈಗ ಗ್ರಾಮಾಂತರಕ್ಕೂ ವಿಸ್ತರಿಸಿದ್ದು, ನಿನ್ನೆ ಮಧ್ಯರಾತ್ರಿ ಒಂದೇ ದಿನ ಎರಡು ಮನೆ ಮತ್ತು ಒಂದು ದೇವಸ್ಥಾನದಲ್ಲಿ ಸರಣಿ ಕಳುವಿನ ಘಟನೆ ನಡೆದಿದೆ.
ತಾಲೂಕಿನ ಅಮರಾವತಿ, ಗವಿಗಟ್ಟು, ಆಲ್ದಾಳ್ ಕ್ಯಾಂಪ್‌ಗಳಲ್ಲಿ ಕಳುವಿನ ಘಟನೆ ನಡೆದಿದೆ. ಒಟ್ಟು 18 ತೊಲೆ ಚಿನ್ನ, 6.6 ಲಕ್ಷ ನಗದು ಹಾಗೂ ಬೆಳ್ಳಿಯ ಮೂರ್ತಿ ದೋಚಲಾಗಿದೆ. ಮಾನ್ವಿ ಪಟ್ಟಣದಿಂದ 9 ಕಿ.ಮೀ. ದೂರದಲ್ಲಿರುವ ಅಮರಾವತಿ ಗ್ರಾಮದಲ್ಲಿ ಮಲ್ಲನಗೌಡ ತಂದೆ ರುದ್ರಪ್ಪಗೌಡ ಅವರ ನಿವಾಸದಲ್ಲಿ ಕನ್ನ ಹಾಕಿದ ಕಳ್ಳರು ನಂತರ ಗವಿಗಟ್ಟು ಮತ್ತು ಆಲ್ದಾಳ್ ಕ್ಯಾಂಪಿನ ದೇವಸ್ಥಾನದಲ್ಲೂ ಕಳುವು ಮಾಡಿದ್ದಾರೆ.
ಅಮರಾವತಿಯ ಮಲ್ಲನಗೌಡ ಅವರ ನಿವಾಸದಲ್ಲಿ 10 ತೊಲೆ ಚಿನ್ನ ಮತ್ತು 5 ಲಕ್ಷ ನಗದು ಹಣ ದೋಚಲಾಗಿದೆ. ಕಳುವಿನ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಕಾರ್ಯದ ನಿಮಿತ್ಯ ಬಳ್ಳಾರಿಗೆ ತೆರಳಿದ್ದರೆಂದು ಹೇಳಲಾಗಿದೆ. ಈ ಘಟನೆ ನಂತರ ಗವಿಗಟ್ಟು ಗ್ರಾಮಕ್ಕೆ ತೆರಳಿದ ಕಳ್ಳರು ಶರಣಬಸವ ಅಂಗಡಿ ತಂದೆ ಶಿವರಾಜ ಇವರ ಮನೆಯಲ್ಲಿ ಕನ್ನ ಹಾಕಿದ್ದಾರೆ. ಎಲ್ಲರೂ ಮಹಡಿ ಮೇಲೆ ಮಲಗಿರುವಾಗ ನೆಲ ಮಳಿಗೆಯಲ್ಲಿ ಕಳುವು ಮಾಡಲಾಗಿದೆ. 8 ತೊಲೆ ಚಿನ್ನ, 1.60 ಲಕ್ಷ ನಗದು ಹಣ ದೋಚಲಾಗಿದೆ.
ನಂತರ ಆಲ್ದಾಳ್ ಕ್ಯಾಂಪಿನ ರಾಮ-ಲಕ್ಷ್ಮಣ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿಯೊಂದನ್ನು ಕಳುವು ಮಾಡಲಾಗಿದೆ. ಈ ಕುರಿತು ಪೊಲೀಸರಿಗೆ ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಚಂದ್ರಶೇಖರ ಮತ್ತು ಪಿಎಸ್ಐ ಕಳುವಿನ ಘಟನೆ ನಡೆದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಮೂಲಕ ತನಿಖಾ ಕಾರ್ಯ ಕೈಗೊಳ್ಳಲಾಗಿದೆ. ಯಾರು ಆರೋಪಿಗಳೆನ್ನುವುದು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದೆ ನಗರ ಪ್ರದೇಶದಲ್ಲಿ ಸರಣಿ ಕಳುವಿನ ಪ್ರಕರಣ ಸಂಚಲನ ಮೂಡಿಸಿತ್ತು. ರೈಸ್ ಮಿಲ್, ಮನೆ ಮತ್ತು ಅಂಗಡಿ ಮುಗ್ಗಟ್ಟುಗಳಲ್ಲಿ ಕಳುವಿನ ಪ್ರಕರಣ ನಡೆದಿದ್ದವು. ಇನ್ನೂ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳ ಪತ್ತೆ ಕಾರ್ಯ ನಡೆದಿರುವಾಗಲೇ ಮಾನ್ವಿ ಗ್ರಾಮಾಂತರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ ಎರಡು ಮನೆ ಮತ್ತು ದೇವಸ್ಥಾನ ಕಳುವಿನ ಪ್ರಕರಣಕ್ಕೆ ಜನ ಭಯಭೀತಗೊಳ್ಳುವಂತಾಗಿದೆ.

Leave a Comment