ಮಾನವ ವಿರೋಧಿ ಮಯನ್ಮಾರ್ ಸರ್ಕಾರದ ವಿರುದ್ಧ ಪ್ರತಿಭಟನೆ

ಕಲಬುರಗಿ,ಸೆ.13- ಮಯನ್ಮಾರ (ಬರ್ಮಾ)ದಲ್ಲಿನ ಮುಸ್ಲೀಮರ ಮೇಲೆ ನಡೆಯುತ್ತಿರುವ ಹತ್ಯೆ, ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಖಂಡಿಸಿ ಹಾಗೂ ಸಂತ್ರಸ್ಥರಿಗೆ ಅಗತ್ಯ ನೆರವು ನೀಡುವಂತೆ ಒತ್ತಾಯಿಸಿ (ಗುಲಬರ್ಗಾ ಮಹಿಳಾ ಘಟಕ) ಮುಸ್ಲೀಮ ಮಹಿಳಾ ರಕ್ಷಣಾ ಸಂಘಟನೆ ನೇತೃತ್ವದಲ್ಲಿಂದು ಬೃಹತ್ ಪ್ರತಿಭಟನಾ ಱ್ಯಾಲಿ ನಡೆಸಲಾಯಿತು.
ಅಲ್ಲಿನ ರೋಹಂಗಿಯಾ ಮುಸ್ಲೀಮ ಸಮುದಾಯವನ್ನು ಒತ್ತಾಯದಿಂದ ಮನೆಯಿಂದ ಹೊರ ಹಾಕಿ ಅವರ ಸಾಮೂಹಿಕವಾಗಿ ಹತ್ಯೆ. ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡಲಾಗುತ್ತಿದೆ, ಮಯನ್ಮಾರ್ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. ಅಲ್ಲಿನ ಮುಸ್ಲೀಮ ಸಮುದಾಯದೊಂದಿಗೆ ಅಮಾನವೀಯವಾಗಿ ಮತ್ತು ಅಸಹ್ಯವಾಗಿ ನಡೆಸಿಕೊಳ್ಳುತ್ತಿರುವುದನ್ನು ಬಲವಾಗಿ ಖಂಡಿಸಿದ ಪ್ರತಿಭಟನಾಕಾರರು, ಮ್ಯಾನಮಾರ ಸರ್ಕಾರದ ಮೇಲೆ ಒತ್ತಡ ತಂದು ಅಲ್ಲಿನ ನಿರಾಶ್ರಿತ ಮುಸ್ಲೀಮರಿಗೆ ಸೂಕ್ತ ರಕ್ಷಣೆ ಮತ್ತು ಆಶ್ರಯ ನೀಡಲು ರಾಜತಾಂತ್ರಿಕ ಮಟ್ಟದಲ್ಲಿ ಪ್ರಸ್ತಾಪಿಸುವಂತೆ ರಾಷ್ಟ್ರಪತಿಗಳಿಗೆ ಆಗ್ರಹಿಸಲಾಯಿತು.
ಭಯದಿಂದ ಮತ್ತು ಪ್ರಾಣರಕ್ಷೆಗಾಗಿ ಮ್ಯಾನಮಾರದಿಂದ ಭಾರತ ಮತ್ತು ಬಾಂಗ್ಲಾದೇಶಕ್ಕೆ ವಲಸೆ ಬಂದಿರುವ ರೋಹಂಗಿಯಾ ಮುಸ್ಲೀಮರಿಗೆ ಅಂತರಾಷ್ಟ್ರೀಯ ನಿಯಮವಳಿಯಂತೆ ಆಶ್ರಯ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಮುಸ್ಲೀಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment