ಮಾನವೀಯ ಮೌಲ್ಯ ಎತ್ತಿ ಹಿಡಿದ ಅರ್ಥಪೂರ್ಣ ಸಮ್ಮೇಳನ

ವನಿತಾ.ಎನ್.ದಾಸರಹಳ್ಳಿ

ಪುಟ್ಟಪರ್ತಿ, ಆ ೧೩-ಸಹಸ್ರಾರು ವರ್ಷಗಳಿಂದ ಮಾನವೀಯ ಮೌಲ್ಯಗಳಿಗೆ ಮಹತ್ವ ಕೊಟ್ಟ ಭಾರತೀಯ ಸಂಸ್ಕೃತಿಯಲ್ಲಿ ಇಂದು ಮಾನವೀಯತೆ ಮಾಯವಾಗಿದೆ ಎಂದರೆ ತಪ್ಪಗಲಾರದು. ಇಂತಹ ಮಾನವೀಯ ಮೌಲ್ಯಗಳು ಮತ್ತು ಕಾನೂನು ಜಗತ್ತನ್ನು ಅವಲೋಕಿಸಲು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಆಯೋಜಿಸಿದ ಅರ್ಥಪೂರ್ಣ ಸಮ್ಮೇಳನ ನಿಜಕ್ಕೂ ಮಾನವ ಹಕ್ಕುಗಳಿಗಿಂತ ಮಾನವೀಯತೆಯೇ ಹೆಚ್ಚು ಎಂಬುದನ್ನು ಸಾಬೀತು ಮಾಡಿತು.

ಮೂಲಭೂತ ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ, ಪ್ರತಿಯೊಬ್ಬರು ಸ್ವತಂತ್ರರು, ಸಮಾನ ಹಕ್ಕುಗಳಿಗೆ ಭಾಗಿದಾರರು ಎಂದು ಆಧುನಿಕ ಜಗತ್ತು ಸಾರಿದರೇ, ಸನಾತನ ಧರ್ಮದ ಪ್ರಕಾರ, ಪರಮಾತ್ಮನ ಅಂಶ ಪ್ರತಿಯೊಬ್ಬರ ಆತ್ಮದಲ್ಲಿರುವುದರಿಂದ ಪ್ರಕೃತಿಯಲ್ಲಿ ಎಲ್ಲರು ಸಮಾನರು ಎಂದು ಹೇಳಿದರೇ, ಇದೇ ರೀತಿ ಭಾರತೀಯ ಸಂವಿಧಾನ ಕಾನೂನತ್ಮಕವಾಗಿ ಸಮಾನತೆ ಬಗ್ಗೆ ಸಾರುತ್ತದೆ. ಆಂಧ್ರಪ್ರದೇಶದ ಪುಟ್ಟಪರ್ತಿಯ ಸಾಯಿಬಾಬಾ ಆಶ್ರಮ ಪ್ರಶಾಂತಿ ನಿಲಯದಲ್ಲಿ ನಡೆದ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನ್ಯಾಯಾಧೀಶರ ಕಂಗಲಲ್ಲಿ ಆಧ್ಯಾತ್ಮಿಕತೆ ಜಗತ್ತು ಅನಾವರಣಗೊಂಡು, ನೆರದವರಿಗೆ ಮಾನವೀಯ ಮೌಲ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಹಕ್ಕುಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಉಪದೇಶಿಸಲಾಯಿತು.

ಮೊದಲ ದಿನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಆಧ್ಯಾತ್ಮವು ತರ್ಕವನ್ನು ಮೀರಿದ್ದಾಗಿದೆ. ನನ್ನ ಆಧ್ಯಾತ್ಮಿಕತೆ ಮತ್ತು ನೈತಿಕ ಸಮಾಲೋಚನೆ ನನಗೆ ಇಲ್ಲಿ ಬರುವಂತೆ ಮಾಡಿತು. ವಿಜ್ಞಾನ ಮತ್ತು ಆಧ್ಯಾತ್ಮದ ನಡುವೆ ಘರ್ಷಣೆಯ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಮಾವವೀಯ ಮೌಲ್ಯಗಳ ಅಡಿಪಾಯದ ಮೇಲೆ ಕಾನೂನುಗಳನ್ನು ರಚಿಸಲಾಗಿದೆ. ಮಾನವೀಯ ಮೌಲ್ಯಗಳು ಕುಸಿದರೆ ಇಡೀ ವ್ಯವಸ್ಥೆಯೇ ಕುಸಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೆ ಅಲ್ಲದೇ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಮೂರು ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಮಾನವೀಯತೆ, ವಿವೇಚನಾ ಶೀಲ ಆಲೋಚನೆಗಳು, ಭೌತಿಕ ಹಾಗೂ ಆರ್ಥಿಕ ವಿಚಾರಗಳಲ್ಲಿ ನೈತಿಕತೆ ಯನ್ನು ನಿರಂತರವಾಗಿ ಉಳಿಸಿಕೊಂಡು ಬರಬೇಕು ಎಂದು ಕಿವಿ ಮಾತು ಹೇಳಿದರು. ನಮ್ಮ ಸಂವಿಧಾನವು, ಒಂದು ಅನನ್ಯವಾದ ದಾಖಲೆಯಾಗಿದ್ದು, ಇದು ಕೇವಲ ಕಾನೂನು ಪುಸ್ತಕವಲ್ಲ. ಅದರಲ್ಲಿ ಮಾನವೀಯ ಮೌಲ್ಯಗಳನ್ನು, ಸಮಾಜ ಪಾಲಿಸಬೇಕಾದ ತತ್ವಗಳನ್ನು, ಆಧ್ಯಾತ್ಮಿಕ ರೂಢಿಗಳನ್ನು ಹಾಗೂ ಮನುಷ್ಯನ ಘನತೆಯನ್ನು ಗುರುತಿಸಿ ಎತ್ತಿ ಹಿಡಿಯಲಾಗಿದೆ. ಹಾಗೆಯೇ, ಸಂವಿಧಾನ ಮಾನವೀಯ ಮೌಲ್ಯಗಳ ಪ್ರಮುಖ ಭಾಗವಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯ ಅಹಂಕಾರ ಮತ್ತು ಆತ್ಮಾಭಿಮಾನದ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕು. ದೇವರ ಬಳಿ ಚೌಕಾಸಿ ಮಾಡಿ ಇಲ್ಲಸಲ್ಲದನ್ನು ಬೇಡುವ ಬದಲು ಮೌಲ್ಯಾ ಧಾರಿತ ಬದುಕಿನ ಮೂಲಕ ದೇವರಿಗೆ ಶರಣಾಗಬೇಕು ಎಂದು ಹೇಳಿದರು. ಇದೇ ವೇಳೆ ತಮ್ಮ ಭಾಷಣದ ಮಧ್ಯೆ ಜೋರು ಧ್ವನಿಯಲ್ಲಿ ಸಣ್ಣ ಸಣ್ಣ ಆಧ್ಯಾತ್ಮಿಕ ಪದಗಳನ್ನು ಹೇಳಿದ ನ್ಯಾಯಾಧೀಶರನ್ನು ಕಂಡು ನೆರದಿದ್ದ ಸಾರ್ವಜನಿಕರು ಪುಳಕಿತರಾದರು. ಕಾರ್ಯಕ್ರಮದಲ್ಲಿ ಸತ್ಯ ಸಾಯಿಬಾಬಾರ ಹಲವಾರು ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೂರಾರು ವಕೀಲರು ಭಾಗಿ
ಸಮ್ಮೇಳನದಲ್ಲಿ , ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಎಮ್.ಎನ್.ವೆಂಕಟಾಚಲಯ್ಯ, ನ್ಯಾ ಎ.ಪಿ, ಮಿಶ್ರಾ, ಹಾಗು ಆಂಧ್ರಪ್ರದೇಶ ಮತ್ತು ತೆಲಂಗಣ ಹೈಕೋರ್ಟ್ ನ್ಯಾ ಟಿ.ಬಿ. ರಾಧಕೃಷ್ಣನ್, ಮಣಿಪರ ಹೈಕೋರ್ಟ್‌ನ ನ್ಯಾ.ಎನ್. ಕೋಟಿಶ್ವರ್ ಸಿಂಗ್ ಅವರು ಆಕರ್ಷಕವಾಗಿ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟಿದಲ್ಲದೇ, ಇದರ ರಕ್ಷಣೆಯಲ್ಲಿ ವಕೀಲರ ಸದಾ ಮುಂದಾಗಬೇಕು ಎಂದು ಕರೆ ನೀಡಿದರು. ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾ.ದಲ್ವೀರ್ ಭಂಡಾರಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಎಸ್.ಜೆ ಮುಖ್ಯೋಪಾಧ್ಯಾಯ, ನ್ಯಾ.ಎನ್.ವಿ.ರಮಣ, ದೆಹಲಿ ಹೈಕೋರ್ಟ್ ನ್ಯಾ.ಪ್ರತಿಭಾ ಸಿಂಗ್, ಸತ್ಯಸಾಯಿ ಸೇವಾ ಟ್ರಸ್ಟ್ ಎಸ್. ಎಸ್.ನಾಗಾನಂದ, ಸೇರಿದಂತೆ ೭೫೦ ವಕೀಲರು ಹಾಗೂ ೩೦೦ ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಸ್ತಿನ ಕಾರ್ಯಕ್ರಮ
ಸಮ್ಮೇಳನದಲ್ಲೆಡೆ ಭಾರಿ ಶಿಸ್ತು ಕಾಪಾಡಲು ಸಿಬ್ಬಂದಿ, ಟ್ರಸ್ಟಿಗಳು ಭಾರಿ ಶ್ರಮವಹಿಸಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದರು, ಬಿಳಿ ಬಣ್ಣದ ಉಡುಗೆ ತೊಟ್ಟು ಬಹಳ ಅಚ್ಚುಕಟ್ಟಾಗಿ ಭಾಗಿಯಾದ ಜನರು, ಎಲ್ಲಿಯೂ, ಯಾರಿಗೂ ಆಶ್ರಮ ನಿಯಮ ಉಲ್ಲಂಘನೆ ಆಗದಂತೆ ನಿಗವಹಿಸಿದ್ದು ಮೆಚ್ಚುಗೆ ಪಾತ್ರವಾಯಿತು.

ಆಕರ್ಷಕ ಭಜನೆ
ಆಶ್ರಮದ ಟ್ರಸ್ಟಿ ಹಾಗೂ ಭಕ್ತಾದಿಗಳ, ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ಭಜನೆ ನೆರದವರನ್ನು ಬಹುವಾಗಿ ಆಕರ್ಷಿಸಿತ್ತು, ಇನ್ನು ಸಮ್ಮೇಳನದಲ್ಲಿ ಭಾಗಿಯಾಗಲು ಕರ್ನಾಟಕ, ಮಣಿಪುರ, ಜಾರ್ಖಂಡ್, ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳ ವಕೀಲರು ಪಾಲ್ಗೊಂಡು ನ್ಯಾಯಾಧೀಶರಲ್ಲಿ ಆಧ್ಯಾತ್ಮಿಕತೆ ಬಗ್ಗೆ ಇರುವ ಅಭಿಪ್ರಾಯ ಕೇಳಿ ಸಂತಸಗೊಂಡರು. ಹಾಗೂ ಸಮ್ಮೇಳನದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಭೂರಿಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಭಾಗಿಯಾದ ನ್ಯಾಯಾಧೀಶರಿಗೆ ಬಿಳಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

Leave a Comment