ಮಾನನಷ್ಟ ಮೊಕದ್ದಮೆ ಹಾಕಲಿ : ಪ್ರಿಯಾಂಕ ಸವಾಲು

 

ಕಲಬುರಗಿ,ಮಾ.15-ಉಮೇಶ ಜಾಧವ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಿ, ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಧವ ಅವರ ವಿರುದ್ಧ ಹರಿಹಾಯ್ದರಲ್ಲದೆ, ಜಾಧವ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಎಂದು ಹೇಳಿದರು.

ಆಪರೇಷನ್ ಕಮಲಕ್ಕೆ ಒಳಗಾಗಿ ನಾನು ಹಣ ಪಡೆದಿಲ್ಲ ಜನರ ಹೆಸರಿನಲ್ಲಿ, ಮಕ್ಕಳ ಹೆಸರಿನಲ್ಲಿ ಆಣೆ ಮಾಡಲು ಸಿದ್ದವಿದ್ದೇನೆ ಎಂದು ಜಾಧವ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಆಣೆ ಪ್ರಮಾಣ ಮಾಡುವ ಪದ್ಧತಿ ನಮ್ಮ ಮನೆಯಲ್ಲಿ ಬೆಳೆಸಿಲ್ಲ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಚಿತ್ತಾಪುರ ಮತಕ್ಷೇತ್ರದ ಜನತೆ ಆಶೀರ್ವದಿಸಿ ಗೆಲ್ಲಿಸಿದ್ದಾರೆ. ಅಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಚಿಂಚೋಳಿ ಮತಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನಗೆ ಅಲ್ಲಿನ ಜನ ಮತ್ತು ನಾಯಕರೊಂದಿಗೆ ಚರ್ಚೆ ನಡೆಸಿ ಪಕ್ಷದ ಮುಖಂಡಡರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈಗ ಆ ಚರ್ಚೆಯೇ ಬೇಡ ಎಂದರು.

ಮನೆಯ ಮಗ ಮನೆ ಬಿಟ್ಟು ಓಡಿ ಹೋಗುವುದರ ಮೂಲಕ ಮನೆಯವರಿಗೆ ದ್ರೋಹ ಮಾಡಿದ್ದಾನೆ. ಅವರಿಗೆ ಉತ್ತರ ನೀಡಬೇಕು. ನನಗೇಕೆ ಉತ್ತರ ನೀಡುತ್ತಾರೆ ಎಂದು ಜಾಧವ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

Leave a Comment