ಮಾಧ್ಯಮರಂಗದ ಮಹಾಚೇತನ ಡಾ. ಬಿ.ಎಸ್. ಮಣಿ

ಪತ್ರಿಕಾ ರಂಗದ ಆದರ್ಶ ಚೇತನ:

ಯುವ ಪತ್ರಕರ್ತರ ಸ್ಫೂರ್ತಿಯ ಸೆಲೆ:

ಸಂಜೆವಾಣಿ, ದಿನಸುಡರ್ ಪತ್ರಿಕೆ ಸಂಸ್ಥಾಪಕ ಡಾ. ಬಿ.ಎಸ್. ಮಣಿ ಅಜರಾಮರ ಅವರ ಹುಟ್ಟುಹಬ್ಬದ ದಿನವಾದ ಇಂದು `ನುಡಿ ನಮನ’

ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕನ್ನಡದಲ್ಲಿ “ಸಂಜೆವಾಣಿ” ಸಂಜೆ ದೈನಿಕವನ್ನು ಆರಂಭಿಸುವುದರ ಮೂಲಕ  ಡಾ.ಬಿ.ಎಸ್.ಮಣಿ ಅವರು ಮಾಧ್ಯಮ ರಂಗದಲ್ಲಿ ಹೊಸ ಸಂಚಲನ ಮೂಡಿಸಿದರು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಾಗಲಾಪುರಂ ಗ್ರಾಮದಲ್ಲಿ 1936ರಲ್ಲಿ ಜನಿಸಿದ ಡಾ. ಮಣಿ ಅವರು ಕಿರಿಯ ವಯಸ್ಸಿನಲ್ಲಿಯೇ ಮಾತೃ ವಿಯೋಗ ಅನುಭವಿಸಿದರು.

8ನೇ ತರಗತಿಯವರೆಗೆ ಅಲ್ಫೋನ್ಸ್ ಶಾಲೆಯಲ್ಲಿ ಓದಿದ ಮಣಿ ಅವರು 10ನೇ ತರಗತಿಯನ್ನು ಚೆನ್ನೈನಲ್ಲಿ ಮುಗಿಸಿದರು. ಮುಂದೆ ಚೆನ್ನೈನ ಸರಕಾರಿ ಕಾಲೇಜಿನಲ್ಲಿ ಸಾಹಿತ್ಯ ವಿಷಯದಲ್ಲಿ ಎಂ.ಎ.ಮಾಡಿದಲ್ಲದೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದರು.

“ದಿನತಂತಿ”, “ಮಾಲೈ ಮುರಸು” ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಮಣಿ ಅವರು, 1964 ರಲ್ಲಿ ಬೆಂಗಳೂರಿನಲ್ಲಿ “ದಿನಸುಡರ್” ತಮಿಳು ಸಂಜೆ ಪತ್ರಿಕೆ ಆರಂಭಿಸಿದರು.

ಬೆಂಗಳೂರಿನ ವಿಕ್ಟೋರಿಯಾ ಬಡಾವಣೆಯಲ್ಲಿ “ದಿನಸುಡರ್” ಪತ್ರಿಕೆ ಕಛೇರಿ ಉದ್ಘಾಟನೆಗೆ ಆಗಮಿಸಿದ್ದ ರಾಜಕೀಯ ರಂಗದಲ್ಲಿ ಕಿಂಗ್ ಮೇಕರ್ ಎಂದೇ ಖ್ಯಾತರಾಗಿದ್ದ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿದ್ದ ಕಾಮರಾಜ್ ನಾಡಾರ್ ಅವರು ಕನ್ನಡದಲ್ಲಿ ಪತ್ರಿಕೆ ಆರಂಭಿಸಲು ಮಣಿ ಅವರಿಗೆ ಸಲಹೆ ನೀಡಿದರು. ಕಾಮರಾಜ್ ನಾಡರ್ ಅವರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಣಿ ಅವರು 1982ರ ಡಿಸೆಂಬರ್ 10 ರಂದು “ಸಂಜೆವಾಣಿ” ಸಂಜೆ ದೈನಿಕ ಆರಂಭಿಸಿದರು.

ಆ ಮೂಲಕ ಕನ್ನಡ ಪತ್ರಿಕೋದ್ಯಮದ ಕ್ಷೇತ್ರಕ್ಕೆ ಕಾಲಿರಿಸಿದ ಮಣಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಮಣಿ ಅವರ ದೂರದೃಷ್ಠಿ ಮತ್ತು ಶ್ರಮದಿಂದಾಗಿ ಸಂಜೆವಾಣಿ ಬಹು ಬೇಗನೆ ಓದುಗ ವಲಯವನ್ನು ಆಕರ್ಷಿಸಿತು.

ಮೂವತ್ತೈದು ವರ್ಷಗಳ ಹಿಂದೆಯೇ ಓದುಗರಿಗೆ ಅಂದಿನ ಸುದ್ದಿಯನ್ನು ಅಂದೇ ತಲುಪಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದದ್ದು ಸಂಜೆವಾಣಿಯ ಸಾಹಸಕ್ಕೊಂದು ನಿದರ್ಶನ. ಇದಕ್ಕೆ ಪ್ರಮುಖ ಹಾಗೂ ಮೂಲ ಕಾರಣ ಡಾ. ಬಿ.ಎಸ್. ಮಣಿಯವರ ದೂರದೃಷ್ಠಿ ಮತ್ತು ಶ್ರಮ ಎಂದರೆ ಅತಿಶಯೋಕ್ತಿಯಲ್ಲ. ತಮಿಳು ಸಾಹಿತಿಯೂ ಆಗಿದ್ದ ಮಣಿ ಅವರು ಕಥೆ, ಕಾದಂಬರಿ, ಸಂಶೋಧನಾ ಲೇಖನಗಳು ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಕನ್ನಡ ಹಾಗೂ ತಮಿಳು ಭಾಷಾ ಬಾಂಧವ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಮಣಿ ಅವರು “ಸಂಜೆವಾಣಿ”ಯೊಂದಿಗೆ ಹೊರ ತರುತ್ತಿದ್ದ “ಚಂದನ” ಪ್ರಾಕ್ಷಿಕ ಪತ್ರಿಕೆಯಲ್ಲಿ ಕನ್ನಡದ ಖ್ಯಾತನಾಮರ ಕಥೆ, ಕಾದಂಬರಿ ಪ್ರಕಟಿಸಿ ಸುಲಭ ಬೆಲೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಿದರು.  ಸಾಹಿತಿಯಾಗಿ, ಪತ್ರಕರ್ತರಾಗಿ ಜನ ಮನ್ನಣೆಗೆ ಪಾತ್ರರಾಗಿದ್ದ ಮಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿದ್ದವು.

ಪತ್ರಿಕಾ ರಂಗದಲ್ಲಿ ಹೊಸ ಕ್ರಾಂತಿ
ರಾಜಧಾನಿ ಬೆಂಗಳೂರು ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆವೃತ್ತಿ ಹೊಂದಿರುವ “ಸಂಜೆವಾಣಿ” ಇಂದು ಕರ್ನಾಟಕದ ಮನೆ ಮಾತಾಗಿರುವುದರ ಹಿಂದೆ ಡಾ. ಮಣಿ ಅವರ ಶ್ರಮ ಸಾಕಷ್ಟಿದೆ. ಅಂತರ್ಜಾಲ ಆವೃತ್ತಿ ಆರಂಭಿಸಿದ ಮೊದಲ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆ ಸಂಜೆವಾಣಿಯದ್ದಾಗಿದೆ. ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಸಹ ಸಂಜೆವಾಣಿ ತನ್ನದೆಯಾದ ಓದುಗ ಬಳಗ ಹೊಂದಿದ್ದು, ಅಂದಿನ ಸುದ್ದಿಯನ್ನು ಅಂದೇ ಮುಟ್ಟಿಸುವ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಕ್ರಾಂತಿ ಮಾಡಿದೆ. ಇಂದು ಸಂಜೆವಾಣಿ ಕರ್ನಾಟಕದ ಅತಿದೊಡ್ಡ ಪ್ರಸಾರ ಸಂಖ್ಯೆಯುಳ್ಳ ಏಕೈಕ ಸಂಜೆ ದಿನಪತ್ರಿಕೆ.

ಭಾಷಾ ಬಾಂಧವ್ಯದ ಹೆಗ್ಗುರುತು

ಪ್ರಗತಿಪರ ಚಿಂತಕ, ಲೇಖಕ, ಪತ್ರಕರ್ತ ಪಿ. ಲಂಕೇಶ್ ಅವರ ಸಾಂಗತ್ಯದ ಮೂಲಕ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು-ದೆಸೆ ಒದಗಿಸಿದ್ದು ಮಣಿ ಅವರ ಹೆಗ್ಗಳಿಕೆ.

ಯುವ ಪತ್ರಕರ್ತರಿಗೆ ತಾಯಿಬೇರು
ಪತ್ರಿಕಾರಂಗಕ್ಕೆ ಹೊಸದಾಗಿ ಕಾಲಿರಿಸಿದ ಯುವ ಪತ್ರಕರ್ತರಿಗೆ “ಸಂಜೆವಾಣಿ” ಇವತ್ತಿಗೂ ಸಹ ತಾಯಿಬೇರಿನಂತೆ ಕೆಲಸ ಮಾಡುತ್ತಿದೆ. ಅದೆಷ್ಟೋ ಜನ ಯುವ ಪತ್ರಕರ್ತರು ಇಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. “ಸಂಜೆವಾಣಿ” ಒಂದು ರೀತಿಯಲ್ಲಿ ಪತ್ರಕರ್ತರನ್ನು ತಯಾರು ಮಾಡುವ ಕಾರ್ಖಾನೆ ಎಂದರೆ ಅತಿಶಯೋಕ್ತಿಯೇನಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ, ಹೆಸರಾಂತ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಬಳಗ ತಾವು “ಸಂಜೆವಾಣಿ”ಯಿಂದ ವೃತ್ತಿ ಬದುಕಿಗೆ ಕಾಲಿಟ್ಟವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಯುವ ಪತ್ರಕರ್ತರ ಸಮೂಹವನ್ನು ಬೆಳೆಸಿದ ಶ್ರೇಯಸ್ಸು ಡಾ.ಬಿ.ಎಸ್.ಮಣಿ ಅವರಿಗೆ ಸಲ್ಲುತ್ತದೆ.

ಡಾ.ಬಿ.ಎಸ್.ಮಣಿ ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರು ನಡೆದ ದಾರಿ, ಹಾಕಿಕೊಟ್ಟ ಮಾರ್ಗಸೂಚಿ ಎಂದೆಂದಿಗೂ ಸಂಜೆವಾಣಿ ಬಳಗಕ್ಕೆ ದಿಕ್ಸೂಚಿ.

-ನಾಗರಾಜ ಹೂವಿನಹಳ್ಳಿ

Leave a Comment