ಮಾಧ್ಯಮದವರ ಮೇಲಿನ ಹಲ್ಲೆಗೆ ಖಂಡನೆ ಜಿಲ್ಲಾ ವರದಿಗಾರರ ಕೂಟದ ಪ್ರತಿಭಟನೆ

ದಾವಣಗೆರೆ, ಜೂ. 12 – ಮಾಧ್ಯಮದವರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸದಸ್ಯರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ನಗರದ ಕೆಬಿ ಬಡಾವಣೆಯಲ್ಲಿರುವ ವರದಿಗಾರರ ಕೂಟದಿಂದ ಬೈಕ್ ಱ್ಯಾಲಿ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂವಿಧಾನದ 4ನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರದವರ ಮೇಲೆ ಪದೇ ಪದೇ ಹಲ್ಲೆ ಹಾಗೂ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಪತ್ರಕರ್ತರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇತ್ತೀಚಿಗೆ ತುಮಕೂರು ಜಿಲ್ಲೆಯಲ್ಲಿರುವ ಬೇಳೂರು ಬಾಯ್ಲರ್ ಕಂಪನಿಯಿಂದ ವಿಷಾನಿಲ ಸೋರಿಕೆಯಾಗುತ್ತಿದ್ದು, ಅದರಿಂದ ಪರಿಸರಕ್ಕೆ ಹಾಗೂ ಸ್ಥಳೀಯ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದ್ದ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮರಮ್ಯಾನ್ ಮೇಲೆ ಕಂಪನಿಯ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಾಧ್ಯಮ ಉಪಕರಣಗಳನ್ನು ಧ್ವಂಸಗೊಳಿಸಿರುವುದು ಖಂಡನೀಯ. ಈ ಕೂಡಲೇ ಹಲ್ಲೆ ಮಾಡಿದವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಂಡು ಮಾಧ್ಯಮದವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ ಪದೇ ಪದೇ ಈ ರೀತಿಯ ಹಲ್ಲೆ ಹಾಗೂ ದೌರ್ಜನ್ಯ ನಡೆಯದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು. ಪದೇ ಪದೇ ಹಲ್ಲೆ ನಡೆಯುತ್ತಿರುವುದು ಖಂಡನೀಯ. ವೈದ್ಯರಿಗೆ ರೂಪಿಸಿರುವ ರಕ್ಷಣೆ ಕಾಯ್ದೆಯಂತೆ ಪತ್ರಕರ್ತರ ರಕ್ಷಣೆಗೂ ಸಹ ಕಾಯ್ದೆ ರೂಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಸ್ ಬಡದಾಳ್, ಹಿರಿಯ ಪತ್ರಕರ್ತರಾದ ಕೆ.ಏಕಾಂತಪ್ಪ, ವೀರಪ್ಪ ಎಂ ಬಾವಿ, ಎನ್.ಆರ್.ನಟರಾಜ್, ರಮೇಶ್ ಜಹಗೀರ್‍ದಾರ್, ಜಿ.ಎಂ.ಆರ್. ಆರಾಧ್ಯ, ವಿವೇಕ್ ಎಲ್ ಬದ್ದಿ, ವರದರಾಜ್, ರವಿಬಾಬು, ಕೆ.ಎಸ್.ಶಂಭು, ಮಂಜುನಾಥ್ ಕಾಡಜ್ಜಿ, ಶಿವಕುಮಾರ್, ವೀರೇಶ್, ರವಿರಾಜ್ ಸೊನ್ನದ್, ಪುನೀತ್, ಮಧು, ಕಿರಣ್ ಕುಮಾರ್, ವಿದ್ಯಾನಾಯ್ಕ್, ವಿಜಯ್ ಜಾದವ್, ಪ್ರಭುರುದ್ರೇಗೌಡ, ಶಾಂತಕುಮಾರ್, ಪ್ರವೀಣ್ ಬಾಡಾ, ದೇವಿಕಾ ಸುನೀಲ್, ತೇಜಸ್ವಿನಿ ಪ್ರಕಾಶ್, ರಮೇಶ್, ವಿಶ್ವನಾಥ್ ಟಿ.ಆರ್, ಹೇಮಂತ್ ಕುಮಾರ್,ರಾಮು,ರಾಮ್ ಪ್ರಸಾದ್,ಅಣ್ಣಪ್ಪ ಸೇರಿದಂತೆ ಅನೇಕ ಪತ್ರಕರ್ತರಿದ್ದರು.

Leave a Comment