ಮಾದಿಗ ಶಾಸಕರಿಗೆ ಸಚಿವಸ್ಥಾನಕ್ಕಾಗಿ ಆಗ್ರಹ

ಬಳ್ಳಾರಿ, ಜೂ.12: ರಾಜ್ಯ ವಿಧಾನಸಭೆಗೆ ನೂತನವಾಗಿ ಅಧಿಕಾರಕ್ಕೆ ಬಂದ ಜೆಡಿಎಸ್, ಕಾಂಗ್ರೆಸ್ ಸಮ್ಮಿಸ್ರ ಸರ್ಕಾರದಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯದ ಒಬ್ಬರಿಗೂ ಕೂಡ ಮಂತ್ರಿ ಸ್ಥಾನ ನೀಡದೇ ಅನ್ಯಾಯ ಮಾಡಿರುವುದನ್ನು ಸಂಘವು ಖಂಡಿಸಿದ್ದು ಮುಂಬರುವ ದಿನಗಳಲ್ಲಿ ಮಾದಿಗ ಜನಾಂಗದ ಶಾಸಕರಿಗೆ ಸಚಿವಸ್ಥಾನ ನೀಡಬೇಕೆಂದು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಮಹಾ ಸಂಘ ಆಗ್ರಹಿಸಿದೆ.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಮುಖಂಡರುಗಳಾದ, ಹೆಚ್.ಸಿದ್ದಣ್ಣ, ಎಸ್.ರಾಘವೇಂದ್ರ, ಕೆ.ಕುಮಾರಸ್ವಾಮಿ, ಹೊನ್ನಪ್ಪ, ಶಾಂಷಾಲಪ್ಪ ಮೊದಲಾದವರು ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯವು ಇದ್ದರೂ ಕೂಡ ಕಾಂಗ್ರೆಸ್ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಕೂಡ ತಾರತಮ್ಯ ಮಾಡಿದ್ದು ವಿಧಾನಸಭೆಯಲ್ಲಿ ಗೆದ್ದ ಒಬ್ಬೆ ಒಬ್ಬ ಮಾದಿಗ ಸಮುದಾಯದ ಮಹಿಳೆಗೂ ಕೂಡ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಅನ್ಯಾಯ ಮಾಡುತ್ತಿರುವುದು ಖಂಡನೀಯ. ಈಗಲಾದರೂ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಈ ಸಮುದಾಯದ ಶಾಸಕರಾದ ರೂಪಶಶಿಧರ್, ಆರ್.ಬಿ.ತಿಮ್ಮಾಪುರ್, ಆರ್.ಧರ್ಮಸೇನ ಇವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಯಿತು.

ಸರ್ಕಾರದ ಉನ್ನತ ಹುದ್ದೆಗಳಲ್ಲಿ ಖಾಸಗಿ ವಲಯದ ಪರಿಣಿತ ವ್ಯಕ್ತಿಗಳನ್ನು ನೇಮಕ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿರುವುದನ್ನು ಸಂಘವು ಪ್ರತಿಭಟಿಸುತ್ತದೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್. ವ್ಯಕ್ತಿಗಳನ್ನು ಹಿಂಬಾಗಿಲು ಮೂಲಕ ತುಂಬಲು ಆಯೋಗದಂತಹ ಸ್ವ-ಯತ್ತ ಸಂಸ್ಥೆಯನ್ನು ಕಡೆಗಣಿಸಿ ಸಂವಿಧಾನ ಸಂಸ್ಥೆಗಳಿಗೆ ಅಪಮಾನಗೊಳಿಸುತ್ತಾ ಮೀಸಲಾತಿ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು, ಕಳೆದ ಚುನಾವಣೆ ಸಂದರ್ಭದಲ್ಲಿ ನೀಡದ ಭರವಸೆಯಂತೆ ಪಕ್ಷದ ಮುಖಂಡರು ಬಳ್ಳಾರಿ ಜಿಲ್ಲೆಯ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕು ಎಂದರು.

ಬರುವ ಆಗಸ್ಟ್ ತಿಂಗಳಲ್ಲಿ ಸಂಘದ ವತಿಯಿಂದ ಮಾದಿಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಸಮುದಾಯದ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು, ಹಿರಿಯ ಮುಖಂಡರು ಹಾಜರಿರಲಿದ್ದಾರೆ.

Leave a Comment