ಮಾದರಿ ಪೊಲೀಸ್ ಠಾಣೆ ಲೋಕಾರ್ಪಣೆ

ತುಮಕೂರು, ಸೆ. ೫- ರಾಜ್ಯ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿಗಳೂ ಆಗಿರುವ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲಿ ಇಂದು ಸಂಜೆ ಲೋಕಾರ್ಪಣೆಗೊಳ್ಳಲಿರುವ ಕೋಳಾಲ ಪೊಲೀಸ್ ಠಾಣೆಯನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ಇಡೀ ರಾಜ್ಯದಲ್ಲೇ ಮಾದರಿ ಠಾಣೆಯನ್ನಾಗಿ ನಿರ್ಮಾಣ ಮಾಡಿದ್ದು, ದೇವಾಲಯ, ಉದ್ಯಾನವನದ ಮಧ್ಯೆ ಕಂಗೊಳಿಸುತ್ತಿದೆ.

ಕೊರಟಗೆರೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣೆ ನಿರ್ಮಾಣ ಇಡೀ ರಾಜ್ಯದಲ್ಲೇ ಇತಿಹಾಸ ಸೃಷ್ಠಿಸಿದೆ. ಅತ್ಯಾಧುನಿಕ ಉದ್ಯಾನವನ, ಗಣಪತಿ ದೇವಾಲಯ ನಿರ್ಮಾಣ ಹಾಗೂ ವಾಹನಗಳ ನಿಲ್ದಾಣದೊಂದಿಗೆ ಸುಮಾರು ಅರ್ಧ ಎಕರೆಗೂ ಹೆಚ್ಚು ಜಮೀನಿನಲ್ಲಿ ಈ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗಿದೆ.

ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸುಸಜ್ಜಿತ ಪೊಲೀಸ್ ಠಾಣೆಗೆ ಕೋಳಾಲ ಹೋಬಳಿಯ 145 ಹಳ್ಳಿಗಳ ಗ್ರಾಮಸ್ಥರು, ಮುಖಂಡರುಗಳು ಸ್ವಯಂಪ್ರೇರಿತರಾಗಿ ದಾನಿಗಳಾಗಿ ಹಿಂದೆಂದೂ ಕಾಣದಂತಹ ಪ್ರೋತ್ಸಾಹವನ್ನು ನೀಡುವ ಮೂಲಕ ಪೊಲೀಸ್ ಠಾಣೆಯ ನಿರ್ಮಾಣ ಮತ್ತು ಪಾರ್ಕ್‌ಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಲೋಡ್ ಮಣ್ಣನ್ನು ಸುರಿಸಿ ಮತ್ತು ಅಲ್ಲಿದ್ದ ಬೆಟ್ಟವನ್ನು ಕರಗಿಸಿ ಸುಸಜ್ಜಿತವಾಗಿ ಉದ್ಯಾನವನ, ವಾಹನಗಳ ನಿಲ್ದಾಣ, ಮತ್ತು ಪಕ್ಕದಲ್ಲೇ ಹಾದು ಹೋಗಿರುವ ರಸ್ತೆ ನಿರ್ಮಾಣ ಪೊಲೀಸ್ ಠಾಣೆಯ ಮೆರಗನ್ನು ಹೆಚ್ಚಿಸಿದೆ.
ಕಳೆದ 4 ತಿಂಗಳಿಂದ ನಿರಂತರವಾಗಿ ನಡೆಯುತ್ತಿದ್ದ ಈ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡಿದ್ದು, ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದಲ್ಲೇ ಇತಿಹಾಸವನ್ನು ಸೃಷ್ಠಿಸಿದೆ.

ಇಂತಹ ಸುಸಜ್ಜಿತ, ಆಧುನಿತ ಸೌಲಭ್ಯಗಳುಳ್ಳ ಪೊಲೀಸ್ ಠಾಣೆ ಜಿಲ್ಲೆ ಹಾಗೂ ರಾಜ್ಯದಲ್ಲೇ ನಿರ್ಮಾಣವಾಗಿಲ್ಲ ಎಂದು ಜಿಲ್ಲೆಯ ಪೊಲೀಸರೇ ಹೆಮ್ಮೆಪಡುತ್ತಾರೆ.

ಈ ಸುಸಜ್ಜಿತವಾದ ಪೊಲೀಸ್ ಠಾಣೆಯನ್ನು ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇಂದು ಸಂಜೆ ಲೋಕಾರ್ಪಣೆಗೊಳಿಸುತ್ತಿರುವುದು ಇತಿಹಾಸದ ಪುಟಗಳಿಗೆ ಸೇರ್ಪಡೆಗೊಳ್ಳುತ್ತಿದೆ.

ಈ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್‌ಇನ್ಸ್‌ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಗಳ ಇಚ್ಛಾಶಕ್ತಿ ಹಾಗೂ ಮುತುವರ್ಜಿಯ ಪರಿಣಾಮ 145 ಹಳ್ಳಿಗಳ ಗ್ರಾಮಸ್ಥರ ಸೇವೆಗಾಗಿ ಈ ಸುಸಜ್ಜಿತ ಪೊಲೀಸ್ ಠಾಣೆ ಲೋಕಾರ್ಪಣೆಗೊಳ್ಳುತ್ತಿದೆ.

ಕೇಂದ್ರೀಯ ವಲಯ ಐಜಿಪಿ ಬಿ. ದಯಾನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್, ಅಡಿಷನಲ್ ಎಸ್ಪಿ ಡಾ. ಶೋಭರಾಣಿ, ಮಧುಗಿರಿ ಡಿವೈಎಸ್ಪಿ ಕಲ್ಲೇಶಪ್ಪ ಅವರು ಪಿಎಸ್ಐ ಸಂತೋಷ್ ಅವರಿಗೆ ನೀಡಿದ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಈ ಪೊಲೀಸ್ ಠಾಣೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರೆ ತಪ್ಪಾಗಲಾರದು.

ಇಂದು ಲೋಕಾರ್ಪಣೆಗೊಳ್ಳುತ್ತಿರುವ ಪೊಲೀಸ್ ಠಾಣೆಗೆ 145 ಹಳ್ಳಿಗಳ ಗ್ರಾಮಸ್ಥರು, ರಾಜಕೀಯ ಮುಖಂಡರುಗಳು ಸಾಕ್ಷಿಯಾಗಲಿದ್ದಾರೆ

ಈ ಬಗ್ಗೆ “ಸಂಜೆವಾಣಿ”ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್  ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಬಳಸಿಕೊಂಡು ಪೊಲೀಸ್ ಠಾಣೆ ವ್ಯಾಪ್ತಿಯ 145 ಹಳ್ಳಿಗಳ ಗ್ರಾಮಸ್ಥರ ನೆರವು, ಸಲಹೆ, ಸಹಕಾರ ಬಳಸಿಕೊಂಡು ಅತ್ಯನ್ನತವಾಗಿ ಪೊಲೀಸ್ ಠಾಣೆ ನಿರ್ಮಾಣಗೊಂಡಿದೆ. ಇದೇ ರೀತಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಬೇಕಾಗಿರುವ ಪೊಲೀಸ್ ಠಾಣೆಯನ್ನು ಸುಸಜ್ಜಿತವಾಗಿ ಕಟ್ಟಬೇಕೆಂಬ ಮಹದಾಸೆ ಹೊಂದಿದ್ದೇವೆ. ಇದಕ್ಕೆ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ ಜಿ. ಪರಮೇಶ್ವರ್ ಅವರು ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ನಾವು ಇಲಾಖೆಯನ್ನು ಮಾದರಿಯನ್ನಾಗಿ ಮಾಡಲು ಕಂಕಣಬದ್ಧರಾಗಿದ್ದೇವೆ ಎಂದರು.

ಕೇವಲ ಪೊಲೀಸ್ ಠಾಣೆ ನಿರ್ಮಾಣವಲ್ಲದೆ ವಸತಿ ಗೃಹಗಳು, ಇಲಾಖೆಗೆ ಬೇಕಾಗಿರುವ ಸವಲತ್ತುಗಳು, ವಾಹನಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಉತ್ಸುಕರಾಗಿದ್ದಾರೆ. ಅವರ ಸಹಕಾರ ಪಡೆದು ತುಮಕೂರು ಜಿಲ್ಲೆಯಲ್ಲಿ ಜನಸ್ನೇಹಿಯನ್ನಾಗಿ ಮಾಡುವುದರ ಜತೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.

ಕೋಳಾಲ ಪಿಎಸ್ಐ ಸಂತೋಷ್ ಸೇರಿದಂತೆ ಇಲ್ಲಿನ ಸಿಬ್ಬಂದಿಗಳ ಕಾರ್ಯವನ್ನು ಹೃದಯಪೂರ್ವಕವಾಗಿ ಶ್ಲಾಘಿಸುತ್ತೇನೆ. ಹಾಗೆಯೇ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ 145 ಹಳ್ಳಿಗಳ ಗ್ರಾಮಸ್ಥರ ಪ್ರೀತಿ-ವಿಶ್ವಾಸ, ಮಮತೆ ಹಾಗೂ ಅವರು ಇಲಾಖೆಗೆ ನೀಡಿದ ಸಹಕಾರವನ್ನು ಮುಕ್ತಕಂಠದಿಂದ ಶ್ಲಾಘಿಸುವುದಾಗಿ ಅವರು ತಿಳಿಸಿದರು.

Leave a Comment