ಮಾತೃಭಾಷೆಯನ್ನು ಉಳಿಸಿ-ಬೇಳೆಸುವದು ಜನರ ಹೊಣೆ-ಕಲಕೋಟೆ

ಧಾರವಾಡಜ.21 :  ಎಲ್ಲ ಭಾಷೆಗಳೂ ಸುಂದರ. ಅವರವರ ಮಾತೃಭಾಷೆ ಅವರಿಗೆ ಶ್ರೇಷ್ಠ. ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಾಡಿನ ಜನರ ಹೊಣೆ. ಎಲ್ಲರಿಗೂ ತಮ್ಮ ತಮ್ಮ ಭಾಷೆಯ ಮೇಲೆ ಪ್ರೀತಿ, ವಿಶ್ವಾಸ, ಇರಬೇಕು. ಅನ್ಯಭಾಷೆ ಮೇಲೆ ದ್ವೇಷ ಇರಬಾರದು. ಎಲ್ಲ ಭಾಷೆಯನ್ನು ನಾವು ಪ್ರೀತಿಸಬೇಕು, ಗೌರವಿಸಬೇಕು ಎಂದು ಶ್ರೀಮತಿ ಲೀಲಾ ಕಲಕೋಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಸುಶೀಲಾ ಮಲ್ಲೇಶಪ್ಪ ಅಪ್ಪಾಜಿ ದತ್ತಿ ಅಂಗವಾಗಿ ಆಯೋಜಿಸಿದ್ದ `ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಶ್ರೀಮತಿ ಲೀಲಾ ಕಲಕೋಟಿ, ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯನ್ನು ಖಂಡಿತವಾಗಿಯೂ ಅತ್ಯಂತ ಗೌರವದಿಂದ ಪ್ರೀತಿಸಬೇಕು, ಜೊತೆಗೆ ಅನ್ಯ ಭಾಷೆಗಳನ್ನೂ ಕೂಡಾ ಗೌರವದಿಂದ ಕಾಣಬೇಕು ಎಂಬ ತನ್ನ ಆಶಯದಂತೆ ಇಂದಿಲ್ಲಿ ಬಹುಭಾಷಾ ಕವಿಗೋಷ್ಠಿಯನ್ನು ಏರ್ಪಡಿಸಿ ಅನ್ಯಭಾಷೆಗಳಿಗೆ ಗೌರವವನ್ನು ಕೊಡಬೇಕು, ಅವುಗಳಿಗೆ ಪ್ರೋತ್ಸಾಹವನ್ನು ನೀಡಬೇಕೆಂಬ ಸಂದೇಶವನ್ನು ಸಾರಿದೆ. ಎಲ್ಲರೂ ವಿವಿಧ ಭಾಷೆಗಳಾದ ಇಂಗ್ಲೀಷ, ಹಿಂದಿ, ಮರಾಠಿ, ಸಂಸ್ಕೃತ, ಫ್ರೆಂಚ್, ಗುಜರಾತಿ ಭಾಷೆಗಳ ಕವಿಯತ್ರಿಯರು ಭಾಗವಹಿಸಿ, ಕವನ ವಾಚನ ಮಾಡಿದರು. ಎಲ್ಲರೂ ಅರ್ಥಗರ್ಭಿತವಾಗಿ ಮನದಾಳದಿಂದ ವಾಚನ ಮಾಡಿದರು. ಸಮಾಜಕ್ಕೆ ಸಂದೇಶ ನೀಡುವಂಥಹ ಕವಿತೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರೆಂದು ಶ್ಲಾಘಿಸಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಬೆಳಗಾವಿಯ  ಹೇಮಾ ಸೊನೊಳ್ಳಿ-ಇಂಗ್ಲೀಷ,  ಶೋಭಾ ಬನಶಂಕರಿ-ಮರಾಠಿ, ಹುಬ್ಬಳ್ಳಿಯ  ಡಿಂಪಲ್ ಕುರ್ವಾ-ಗುಜರಾತಿ, ಲಕ್ಷ್ಮೇಶ್ವರದ  ಲಲಿತಾ ಕೆರಿಮನಿ-ಸಂಸ್ಕೃತ, ಧಾರವಾಡದ ಕುಮಾರಿ ಭಾಗ್ಯಶ್ರೀ ರಜಪೂತ-ಹಿಂದಿ, ಜಯಶೀಲಾ ಬೆಳಲದವರ-ಕನ್ನಡ, ಡಾ. ಶಕುಂತಲಾ ಕುಂದೂರ-ಫ್ರೆಂಚ್, ಹುಬ್ಬಳ್ಳಿಯ  ಸರೋಜಾ ಮೇಟಿ-ಇಂಗ್ಲೀಷ, ಧಾರವಾಡದ  ಇಂದುಮತಿ ರಾಘವೇಂದ್ರ-ಮರಾಠಿ,  ಲಲಿತಾ ಪಾಟೀಲ-ಕನ್ನಡ,  ಶಾರದಾ ಕೌದಿ- ಹಿಂದಿಯಲ್ಲಿ ಕವನ ವಾಚನ ಮಾಡಿ ನೆರೆದ ಸಭಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಸುಶೀಲಾ ಎಂ. ಅಪ್ಪಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ದತ್ತಿ ದಾನಿಗಳಾದ  ಮಂಜುಳಾ ಜಯಪ್ರಕಾಶ ಕಟ್ಟಿಮನಿ  ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ ಹಾಗೂ  ವೀಣಾ ಸಂಕನಗೌಡರ, ಮೇಘಾ ಹುಕ್ಕೇರಿ, ವೀರಣ್ಣ ಒಡ್ಡೀನ, ಬಿ.ಎಸ್. ಶಿರೋಳ, ಶಿವಣ್ಣ ಬಡಿಗೇರ, ಶ್ರೀಮತಿ ಸುಶೀಲಾ ಅಪ್ಪಾಜಿ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment