ಮಾತೃಪೂರ್ಣ ಯೋಜನೆ ಶೇ. 65 ಯಶಸ್ವಿ

ಬೆಂಗಳೂರು, ನ. ೧೪- ಮಕ್ಕಳನ್ನು ಭ್ರೂಣಾವಸ್ಥೆಯಲ್ಲಿಯೇ ಸದೃಢಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿ ಮಾಡಿರುವ ಮಾತೃಪೂರ್ಣ ಯೋಜನೆ ಶೇ. 65ರಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.
ಅವರಿಂದು ನಗರದ ಬಾಲಭವನದಲ್ಲಿ ಸರ್ಕಾರದ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾತೃಪೂರ್ಣ ಯೋಜನೆ ಅನುಷ್ಟಾನಗೊಳಿಸಲಾಗಿದೆ. ಭ್ರೂಣಾವಸ್ಥೆಯಲ್ಲಿಯೇ ಮಗುವಿನ ಉತ್ತಮ ಆರೋಗ್ಯಕ್ಕಾಗಿ, ಸದೃಢತೆಗಾಗಿ ಈ ಮಹತ್ತರ ಯೋಜನೆ ಜಾರಿ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿಯೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಸೇವನೆಗೆ ಆವಕಾಶ ಕಲ್ಪಿಸಲಾಗಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾಂತ್ವಾನ ಮತ್ತು ವೈದ್ಯಕೀಯ ಚಿಕಿತ್ಸಾ ಘಟಕಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಲಾಗಿದ್ದು, ಸದ್ಯದಲ್ಲಿಯೇ ಈ ಕೇಂದ್ರಗಳನ್ನು ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಆರಂಭಿಸಲಾಗುವುದು ಎಂದರು.
ಮಕ್ಕಳ ಸಂರಕ್ಷಣೆಗಾಗಿ ಹಣಕಾಸಿನ ತುರ್ತು ಸನ್ನಿವೇಶಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿ ಸ್ಥಾಪಿಸಲಾಗಿರುವ ಅಭಯ ನಿಧಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ 25 ಸಾವಿರದಿಂದ 1 ಲಕ್ಷದ ವರೆಗೆ ಹಣ ನೀಡಲಾಗುವುದು. ದೌರ್ಜನ್ಯಕ್ಕೊಳಗಾದ ಮಕ್ಕಳ ಚಿಕಿತ್ಸೆಗೆ 20 ಲಕ್ಷದ ವರೆಗೂ ಹಣಕಾಸಿನ ನೆರವು ನೀಡಲಾಗುವುದು ಎಂದರು.
ಮಮತೆ ತೊಟ್ಟಿಲನ್ನು ಆರಂಭಿಸುವ ಮೂಲಕ ಪೋಷಕರಿಗೆ ಬೇಡವಾದ ಮಕ್ಕಳನ್ನು ಸಾಕಲು ಸರ್ಕಾರ ಸಾಕಷ್ಟು ವ್ಯವಸ್ಥೆ ಕಲ್ಪಿಸಿದೆ. ಈಗಾಗಲೇ ಮಮತೆಯ ತೊಟ್ಟಿಲು ಕೇಂದ್ರಗಳಲ್ಲಿ ಸಾಕಷ್ಟು ಮಕ್ಕಳನ್ನು ಪೋಷಿಸಲಾಗುತ್ತಿದೆ. ಪೋಕ್ಸೋ ಕಾಯ್ದೆ ಸಮರ್ಪಕ ಅನುಷ್ಟಾನಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ ಎಂದ ಅವರು, ಅಂಗವಿಕಲ ತಾಯಂದಿರು ಜನ್ಮ ನೀಡಿದ ಮಕ್ಕಳ ಪೋಷಣೆಗಾಗಿ 2 ವರ್ಷಗಳ ವರೆಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಕಳೆದ 4 ವರ್ಷಗಳಿಂದಲೂ ಮಕ್ಕಳ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಮಕ್ಕಳ ಹಬ್ಬಕ್ಕೆ ಅಂದಾಜು 3 ಲಕ್ಷ ಪೋಷಕರು ಮತ್ತು ಮಕ್ಕಳು ಭಾಗಿಯಾಗಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ನಿಯೋಜನೆ ಮುಖ್ಯಮಂತ್ರಿಗಳು ಉತ್ತಮ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದರು.

Leave a Comment