ಮಾತು -ಕೃತಿ ಒಂದಾಗಲಿ ಯುವಕರಿಗೆ ಅಣ್ಣಾ ಹಜಾರೆ ಕರೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಜ. ೧೨- ಭಾಷಣದಿಂದ ದೇಶ ಬದಲಿಸಲು ಸಾಧ್ಯವಿಲ್ಲ. ಭಾಷಣ ಮತ್ತು ಕೃತಿ ಒಂದಾದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಪದ್ಮಭೂಷಣ ಅಣ್ಣಾ ಹಜಾರೆ ಯುವಕರಿಗೆ ಕರೆ ನೀಡಿದರು.

ವಿವೇಕಾನಂದರ ದಿನಾಚರಣೆಯ ಅಂಗವಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿದ್ಯಾರ್ಥಿ ಪರಿಷತ್ ಹಾಗೂ ಥಿಂಕ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯುವಶಕ್ತಿಯ ಮೇಲೆ ವಿವೇಕಾನಂದರಿಗೆ ಅಪಾರ ನಂಬಿಕೆಯಿತ್ತು. ಭಾರತವನ್ನು ಯುವಶಕ್ತಿಯಿಂದ ಮಾತ್ರ ಬದಲಿಸಲು ಸಾಧ್ಯ ಎನ್ನುವುದನ್ನು ಬಹಳ ಆಳವಾಗಿ ನಂಬಿದ್ದರು. ಯುವಕರು ಮನಸ್ಸು ಮಾಡಿದರೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.

ಗ್ರಾಮಗಳ ಅರ್ಥ ವ್ಯವಸ್ಥೆ ಸುಧಾರಿಸದ ಹೊರತು ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದ ಅವರು, ದೇಶದ ಶೇ. 80 ರಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವಿನಿಂದ ಬಳಲುವವನಿಗೆ ಅನ್ನ ಮುಖ್ಯವೇ ಹೊರತು ವಿಚಾರ ಮುಖ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಸಿದ ಹೊಟ್ಟೆ ತುಂಬಿಸುವ ಕಡೆಗೆ ಸರ್ಕಾರ ಹೆಚ್ಚು ಗಮನ ಹರಿಸಬೇಕು ಎಂದರು.

ಯುವಕರು ಗಾಂಧೀ-ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ದೇಶ ಅಭಿವೃದ್ಧಿ ಸಾಧ್ಯ. ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ, ಕೆಟ್ಟದ್ದನ್ನು ಮಾಡಬೇಡಿ ಎಂದ ಅವರು, ವಿವೇಕಾನಂದರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನನಗೂ ಸಾಧ್ಯವಾಗಿಲ್ಲ. ಆದರೆ ಕೆಲಸಗಳನ್ನು ಹೇಗೆ ಮಾಡಬೇಕೆಂದು ಅವರು ತಿಳಿಸಿದ್ದರು. ಅದನ್ನು ಚೆನ್ನಾಗಿ ಅರಿತಿದ್ದೇನೆ ಎಂದರು.

25 ನೇ ವರ್ಷಕ್ಕೆ ಗಾಂಧೀ, ವಿವೇಕಾನಂದರಿಂದ ಪ್ರಭಾವಿತನಾದೆ. ಸಮಾಜ ಸೇವೆ ಆರಂಭಿಸಿದೆ. ಮದುವೆಯನ್ನು ಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿಯೇ ಉಳಿದೆ. ನನ್ನ ಕುಟುಂಬಸ್ಥರನ್ನು ಭೇಟಿಯಾಗಿ ಎಷ್ಟೋ ವರ್ಷಗಳೇ ಆಗಿವೆ. ನನ್ನ ತಮ್ಮಂದಿರ ಮಕ್ಕಳ ಹೆಸರೇ ನನಗೆ ಗೊತ್ತಿಲ್ಲ. ನಗದು ರೂಪದಲ್ಲಿ ನನಗೆ ತಂದ ಕೋಟ್ಯಾಂತರ ರೂ.ಗಳನ್ನು ಸಮಾಜ ಸೇವೆಗಾಗಿ ಟ್ರಸ್ಟ್ ಮೂಲಕ ವಿನಿಯೋಗಿಸಿದೆ ಎಂದ ಅವರು, ಯುವಕರು ನನ್ನ ಕುಟುಂಬ ನನ್ನದು ಎನ್ನುವ ಸ್ವಾರ್ಥವನ್ನು ಬಿಟ್ಟು, ಇಡೀ ದೇಶವೇ ನನ್ನ ಕುಟುಂಬ ಎನ್ನುವ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕ ರುದ್ರ ಪ್ರತಾಪ್, ಮಾತಾ ವಿವೇಕಾಮಯಿ, ವಿವೇಕ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶದ ಅಭಿವೃದ್ಧಿಗೆ ಅಡಚಣೆಯಾಗಿಲ್ಲ. ಜನಸಂಖ್ಯೆ ಹೆಚ್ಚಿದಷ್ಟು ಮಾನವ ಶಕ್ತಿ ಹೆಚ್ಚಲಿದೆ. ಈ ಶಕ್ತಿ ಸದ್ಭಳಕೆಯಾದರೆ ದೇಶ ಅಭಿವೃದ್ಧಿ ಕಾಣಲಿದೆ. ಮುಖ್ಯವಾಗಿ ದೇಶದ ಉದ್ಯೋಗದ ವಿನ್ಯಾಸ ಬದಲಾಗಬೇಕು. ಡಿಜಿಟಲ್ ಮಧ್ಯ ಪ್ರವೇಶಕ್ಕಿಂತಲೂ ಮಾನವ ಸಂಪನ್ಮೂಲದ ಮಧ್ಯ ಪ್ರವೇಶ ಸಮಸ್ಯೆಗಳ ನಡುವೆ ಅಗತ್ಯ. ವಿದ್ಯಾರ್ಥಿಗಳು ಹಳ್ಳಿಗೆ ತೆರಳಿ ಗ್ರಾಮೀಣ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಗ್ರಾಮಗಳ ಸ್ಥಿತಿಗತಿಗಳನ್ನು ಬದಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ನಮ್ಮಲ್ಲಿ ಲಭ್ಯವಿರುವ ಶೇ.100 ರಷ್ಟು ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಂಡರೆ ದೇಶ ವಿಶ್ವದಲ್ಲೇ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಸುನೀಲ್ ಅಂಬೇಘರ್ ಸಲಹೆಗಾರರು, ಥಿಂಕ್ ಇಂಡಿಯಾ

Leave a Comment