ಮಾತಿನ ವರಸೆ ಬದಲಿಸಿದ ತಮ್ಮಣ್ಣ

ಮದ್ದೂರು, ಮಾ. ೧೪- ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದರೂ ಅವರೇ ಒಪ್ಪಲಿಲ್ಲ. ತಾವು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಹೇಳಿರುವುದು ರಾಜಕೀಯ ವಲಯದಲ್ಲಿ ಇದೀಗ ಮಿಂಚಿನ ಸಂಚಲವನ್ನುಂಟು ಮಾಡಿದೆ.

ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡದ ಸುಮಲತಾ ಅವರು, ಮಂಡ್ಯ ಜನರ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ಕಳೆದ ವಾರವಷ್ಟೇ ಟೀಕಿಸಿದ ಡಿ.ಸಿ ತಮ್ಮಣ್ಣ ಅವರು ಈಗ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಡಿಸುವ ಆಸೆ ಇತ್ತು ಎಂದು ಮಾತಿನ ವರಸೆ ಬದಲಿಸಿದ್ದಾರೆ.

ಆದರೆ, ತಮ್ಮಣ್ಣ ಅವರ ಈ ಹೇಳಿಕೆ ಬಗ್ಗೆ ಸಿಟ್ಟಿಗೆದ್ದಿರುವ ಸುಮಲತಾ ಅವರು, ಇದು ನೂರಕ್ಕೆ ನೂರರಷ್ಟು ಸುಳ್ಳು ಎಂದು ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ.  ಈ ಮಧ್ಯೆ ಹತ್ತಿರದ ಸಂಬಂಧಿ ಕೂಡ ಸುತ್ತಿಗಾರರೊಂದಿಗೆ ಮಾತನಾಡಿ, ಡಿ.ಸಿ ತಮ್ಮಣ್ಣ ಅವರನ್ನು ಭೇಟಿ ಮಾಡಿದಾಗ ಸುಮಲತಾ ಅವರನ್ನು ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡಿಸುವ ಯಾವುದೇ ಮಾತುಕತೆ ನಡೆದಿಲ್ಲ. ಜೆಡಿಎಸ್ ಪಕ್ಷದಲ್ಲಿ 8 ಜನ ಶಾಸಕರಿದ್ದು, ಸುಮಲತಾ ಸ್ಪರ್ಧೆ ಮಾಡಿ ಗೆಲ್ಲಲೂ ಆಗುವುದಿಲ್ಲ, ಈ ರೀತಿ ಮಾಡುವುದೂ ಒಳ್ಳೆಯದೂ ಅಲ್ಲ ಎಂದು ನನಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿಸುವ ಆಸೆ ಇತ್ತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸುವ ಪ್ರಯತ್ನ ನಡೆಸಿದರೂ ಯಾವುದು ಫಲ ಕೊಡಲಿಲ್ಲ. ಸುಮಲತಾ ಅವರು ಕಡೇ ಗಳಿಗೆಯವರೆಗೂ ಒಪ್ಪಲಿಲ್ಲ ಎಂದು ತಮ್ಮಣ್ಣ ತಿಳಿಸಿದರು.

ಹತ್ತಿರದ ಸಂಬಂಧಿ ಮಧು, ನಾನು ಮತ್ತು ನನ್ನ ಮಗ ಎಲ್ಲರೂ ಸೇರಿ ಅವರನ್ನು ಒಪ್ಪಿಸುವ ಪ್ರಯತ್ನಗಳನ್ನು ಮುಂದುವರೆಸಿದೆವು. ಆದರೂ ಸಂಧಾನಕ್ಕೆ ಸುಮಲತಾ ಕೊನೆಗೂ ಒಪ್ಪಲಿಲ್ಲ ಎಂದು ಅವರು ತಿಳಿಸಿದರು.

ಸುಮಲತಾ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಮಾಡಿ ಮಂಡ್ಯದಿಂದ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದರೆ, ಅವರಿಗೇ ಟಿಕೆಟ್ ಕೊಡುತ್ತಿದ್ದರು. ಆ ಕೆಲಸವನ್ನು ಅವರು ಮಾಡಲಿಲ್ಲ. ಅವರೇ ಒಪ್ಪದಿದ್ದಾಗ ನಾವು ಸುಮಲತಾ ಹೆಸರನ್ನು ಶಿಫಾರಸು ಮಾಡಲಿಲ್ಲ ಎಂದು ಹೇಳಿದ್ದಾರೆ. ಸುಮಲತಾ ಬಗ್ಗೆ ಹರಿಹಾಯುತ್ತಿದ್ದ ಜೆಡಿಎಸ್ ನಾಯಕರು ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮೃದುಧೋರಣೆ ತಾಳಿದ್ದಾರೆ.

Leave a Comment