ಮಾಜಿ ಸಚಿವ ಅಮರನಾಥ ಶೆಟ್ಟಿ ವಿಧಿವಶ

ಮಂಗಳೂರು, ಜ.೨೭- ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ(೮೦) ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದರು. ಹಲವು ದಶಕಗಳ ಜನತಾಪರಿವಾರದಲ್ಲಿಯೇ ಸಕ್ರಿಯರಾಗಿದ್ದ ಅವರು ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದರೂ ಕೊನೆಯವರೆಗೂ ಜೆಡಿಎಸ್‌ನಲ್ಲಿಯೇ ಉಳಿದುಕೊಂಡು ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದರು.
ಅಮರನಾಥ ಶೆಟ್ಟಿ ಅವರು ೧೯೬೫ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಕಾರ್ಕಳ ತಾಲ್ಲೂಕಿನ ಪಾಲಡ್ಕ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆರಂಭಿಕ ರಾಜಕೀಯ ಬದುಕು ನಡೆಸಿದ್ದರು. ನಂತರ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲ್ಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರಾಗಿ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಮೂಡಬಿದರೆ ವಿಧಾನಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ೧೯೮೩ರಲ್ಲಿ ಮೊದಲ ಬಾರಿಗೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ೧೯೮೭, ೧೯೯೪ರಲ್ಲಿ ಕೂಡ ಜಯಗಳಿಸಿದ್ದರು. ಆಗಿನ ಜನತಾ ಪರಿವಾರದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ರಾಮಕೃಷ್ಣ ಹೆಗಡೆ ಸರ್ಕಾರ ಹಾಗೂ ೧೯೯೯ರಲ್ಲಿ ಜೆ.ಹೆಚ್. ಪಟೇಲ್ ಅವರ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು. ನಂತರದ ಚುನಾವಣೆಗಳಲ್ಲಿ ಸತತವಾಗಿ ಮೂರು ಬಾರಿ ಸೋಲು ಅನುಭವಿಸಿದ್ದರು. ಅಭಯಚಂದ್ರ ಎದುರು ಸೋಲು ಅನುಭವಿಸಿದ ನಂತರ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದ ಅವರು ೨೦೧೬ರಲ್ಲಿ ರಾಜಕೀಯದಿಂದ ನಿವೃತ್ತರಾಗಿದ್ದರು. ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಅವರು ಇತ್ತೀಚಿನ ದಿನಗಳವರೆಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಮರನಾಥ ಶೆಟ್ಟಿಯವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Comment