ಮಾಜಿ ಸಚಿವರಿಂದ ಕುಂಚಿಟಿಗ ಸಭಾಭವನ ವೀಕ್ಷಣೆ

ತುಮಕೂರು, ನ. ೭- ನಗರದ ಹಳೆಯ ರಾಷ್ಟ್ರೀಯ ಹೆದ್ದಾರಿ-4ರ ಕೋತಿತೋಪಿನ ಜಿ.ಪಂ. ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ಕುಂಚಿಟಿಗ ಒಕ್ಕಲಿಗರ ಸಭಾ ಭವನದ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ಶಾಸಕ ಬಿ. ಸತ್ಯನಾರಾಯಣ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಹಾಗೂ ಸಮುದಾಯದ ಇತರೆ ಮುಖಂಡರು ವೀಕ್ಷಿಸಿದರು.

ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಅಂತಸ್ತಿನ ಭವ್ಯ ಕಟ್ಟಡದ ನೆಲ ಮಹಡಿ ಮತ್ತು ಮೊದಲು ಅಂತಸ್ತು ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಇದೇ ದೀಪಾವಳಿ ಹಬ್ಬದಂದು ಗೃಹ ಪ್ರವೇಶಕ್ಕೆ ಅಗತ್ಯವಿರುವ ಹೋಮ, ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದ ಹಿರಿಯ ಮುಖಂಡರೊಂದಿಗೆ ಕಟ್ಟಡಕ್ಕೆ ಭೇಟಿ ನೀಡಿ, ಅಂತಿಮ ಹಂತದಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಕುಂಚಿಟಿಗ ಸಮುದಾಯದ ಶೈಕ್ಷಣಿಕ ಅಭಿವೃದ್ದಿಯ ಜತೆಗೆ, ಅವರ ಅರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಕುಂಚಿಟಿಗ ಒಕ್ಕಲಿಗರ ಸಭಾ ಭವನ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಬಹುದು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕರೆಸಿ, ಅದ್ದೂರಿಯ ಉದ್ಘಾಟನಾ ಸಮಾರಂಭ ಏರ್ಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಆರ್. ಕಾಮರಾಜು, ಪುಟ್ಟಕಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Comment